×
Ad

ದಾವಣಗೆರೆ: ಹೆಗಡೆಯನ್ನು ಕೇಂದ್ರ ಸಚಿವ ಸಂಪುಟದಿಂದ ಕೈ ಬಿಡಲು ಆಗ್ರಹಿಸಿ ಪ್ರತಿಭಟನೆ

Update: 2017-12-29 19:29 IST

ದಾವಣಗೆರೆ,ಡಿ.29 : ಸಂವಿಧಾನವನ್ನು ಬದಲಿಸುವ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ವಿರುದ್ಧ ರಾಜ್ಯದ ವಿವಿಧ ಭಾಗಗಳಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ರಾಜ್ಯ ಪ್ರದೇಶ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಅಧ್ಯಕ್ಷ ಜಕ್ಕಪ್ಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುವುದು ಮತ್ತು ಅದರಲ್ಲಿರುವ ಜಾತ್ಯಾತೀತ ಪದಗಳ ಬಗ್ಗೆ ಲೇವಡಿ ಮಾಡುವುದು ರಾಷ್ಟ್ರದ್ರೋಹದ ಕೃತ್ಯ. ಸಚಿವರ ಈ ಕೃತ್ಯವನ್ನು ಇಡೀ ದೇಶವೇ ಖಂಡಿಸಿದೆ. ಇಂತಹ ಭಾಷೆ ಬಳಸಿದ ತಪ್ಪು ಅರಿವಾದ ನಂತರ ಸಚಿವ ಅನಂತ್ ಕುಮಾರ್ ಹೆಗಡೆ ಅವರು ಲೋಕಸಭೆಯಲ್ಲಿ ಕ್ಷಮೆಯಾಚಿಸಿರಬಹುದು, ಹಾಗೆಂದ ತಕ್ಷಣ ಅವರು ಮಾಡಿದ ರಾಷ್ಟ್ರದ್ರೋಹದ ಕೃತ್ಯಕ್ಕೆ ಕ್ಷಮೆ ಇಲ್ಲ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಈಗಾಗಲೇ ಹರಿಹರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಬರುವ ದಿನಗಳಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ತಿಳಿಸಿದರು.

ರಾಷ್ಟ್ರಪತಿಗಳು ಕೂಡಲೇ ಸಚಿವರನ್ನು ಕೇಂದ್ರ ಸಂಪುಟದಿಂದ ಕೈ ಬಿಡಲು ಶಿಫಾರಸ್ಸು ಮಾಡಬೇಕು. ರಾಷ್ಟ್ರದ್ರೋಹದ ಆರೋಪದ ಮೇರೆಗೆ ಅವರನ್ನು ಬಂಧಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದ ಅವರು, ಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ. ಜಾತಿಯ ಅಭ್ಯರ್ಥಿಗಳ ಸ್ಪರ್ಧೆಗೆ ಹೆಚ್ಚುವರಿಯಾಗಿ ಐದು ಕ್ಷೇತ್ರಗಳಲ್ಲಿ ಟಿಕಟ್ ನೀಡಬೇಕೆಂದು ಮನವಿ ಮಾಡಲಾಗಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಎಸ್‍ಸಿ ವರ್ಗಕ್ಕೆ ಮೀಸಲಿರುವ 36 ಕ್ಷೇತ್ರಗಳ ಪೈಕಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೆವು. ಈ ಬಾರಿಯ ಚುನಾವಣೆಯಲ್ಲಿ ಸಾಮಾನ್ಯ ವರ್ಗದ 5 ಸ್ಥಾನಗಳಲ್ಲಿ ಹೆಚ್ಚುವರಿಯಾಗಿ ನೀಡಲು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ವಿಭಾಗದ ಜಿಲ್ಲಾಧ್ಯಕ್ಷ ಬಿ.ಎಚ್. ವೀರಭದ್ರಪ್ಪ, ಪ್ರಸನ್ನಕುಮಾರ್, ಎಚ್. ಚಂದ್ರಪ್ಪ, ಬಸವರಾಜ್, ನೇತ್ರಾವತಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News