×
Ad

ಎತ್ತಿನಹೊಳೆ ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

Update: 2017-12-29 19:35 IST

ಚಿಕ್ಕಬಳ್ಳಾಪುರ, ಡಿ.29: ಶಾಶ್ವತ ಬರಪೀಡಿತ ಜಿಲ್ಲೆಗಳಿಗೆ ನೀರು ಒದಗಿಸುವ ರಾಜ್ಯ ಸರಕಾರದ ಮಹತ್ವಕಾಂಕ್ಷಿಯಾದ ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಶುಕ್ರವಾರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಸಾಧನ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಎತ್ತಿನಹೊಳೆ ಯೋಜನೆ ದುಡ್ಡು ಹೊಡೆಯುವ ಯೋಜನೆಯಾಗಿದ್ದು, ತಾನು ಸಿಎಂ ಆದಲ್ಲಿ ಎತ್ತಿನಹೊಳೆ ಯೋಜನೆಯನ್ನು ನಿಲ್ಲಿಸುತ್ತೇನೆಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.ಆದರೆ, ಕುಮಾರಸ್ವಾಮಿ ಅವರಪ್ಪನಾಣೆಗೂ ಮುಖ್ಯಮಂತ್ರಿ ಆಗುವುದಿಲ್ಲ. ಎತ್ತಿನಹೊಳೆ ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಯೋಜನೆಯನ್ನು ವಿರೋಧಿಸುವವರು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜನತೆಯ ವಿರೋಧಿಗಳು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಶಾಸಕ ಸುಬ್ಬಾರೆಡ್ಡಿ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಅವರು, ಜನಪರ ಶಾಸಕನ ಸಾಧನೆಯನ್ನ ಜನತೆ ಮತ್ತೊಮ್ಮೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ಅವರನ್ನು ಮುಂದಿನ ಚುನಾವಣೆಯಲ್ಲಿ ಕನಿಷ್ಟ 50 ಸಾವಿರ ಮತಗಳ ಭಾರೀ ಬಹುಮತದಿಂದ ಆರಿಸಿ ತರಬೇಕು ಎಂದು ಕೋರಿದರು.
ರಾಜ್ಯ ಸರಕಾರ ಜನಪರ ಸಾಧನೆ ಮಾಡುತ್ತಲೇ ಇದೆ. ಯಾರು ಏನೇ ಅಂದರೂ ಸರಕಾರವನ್ನು ಜನ ಬೆಂಬಲಿಸಬೇಕು ಎಂದ ಅವರು, ಸರಕಾರದ ಸಾಧನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿದರು.

ಇದೆ ವೇಳೆ ಮಾತನಾಡಿದ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ವೀರಪ್ಪ ಮೊಯ್ಲಿ, ಫ್ಲೋರೈಡ್‌ಯುಕ್ತ ವಿಷಪೂರಿತ ನೀರಿನಿಂದ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಜನರಿಗೆ ಶುದ್ಧ ಕುಡಿಯುವ ನೀರು ತರುವ ಸಂಕಲ್ಪ ಮಾಡಿದಾಗ ಸಿಎಂ ಅವರು ರಾಷ್ಟ್ರ ಮಟ್ಟದ 5 ತಜ್ಞರ ಸಲಹೆ ಪಡೆದು, ಯೋಜನೆಯ ವಾಸ್ತವತೆಯನ್ನು ಅರಿತಿದ್ದಾರೆ ಎಂದು ಶ್ಲಾಘಿಸಿದರು.

ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ ಈಗಾಗಲೇ ಸುಮಾರು 3 ಸಾವಿರ ಕೋಟಿ ರೂ. ನೀಡಿದ್ದು, ಫೆಬ್ರವರಿಯಲ್ಲಿ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ. ಯೋಜನೆಯ 24ಟಿಎಂಸಿ ನೀರಿನಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 6 ಟಿಎಂಸಿ ನೀರು ದೊರೆಯಲಿದೆ ಎಂದ ಅವರು, ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಜಿಲ್ಲೆಯ ಕೆರೆಗಳನ್ನು ತುಂಬಿಸುವ ವೈಜ್ಞಾನಿಕ ಯೋಜನೆ ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದು ತಿಳಿಸಿದರು.
2013ರಿಂದ 2017ರವರೆಗೆ ಪೋಡಿ ನಿರ್ಮಿಸಿದ ಚಿಕ್ಕಬಳ್ಳಾಪುರ ಜಿಲ್ಲೆಯ ಗುಂಡಿಬಂಡೆ ತಾಲೂಕನ್ನು ರಾಜ್ಯದಲ್ಲೇ ಪ್ರಥಮ ಪೋಡಿ ಮುಕ್ತ ತಾಲೂಕೆಂದು ಸಿಎಂ ಇದೇ ವೇಳೆ ಸಿದ್ದರಾಮಯ್ಯ ಘೋಷಣೆ ಮಾಡಿದರು.

ಗೃಹ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಸುಬ್ಬಾರೆಡ್ಡಿ, ಸಂಸದರಾದ ಕೆ.ಎಚ್.ಮುನಿಯಪ್ಪ, ವೀರಪ್ಪಮೊಯ್ಲಿ, ಶಾಸಕ ಡಾ.ಕೆ.ಸುಧಾಕರ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್, ವಾಣಿ ಕೃಷ್ಣಾರೆಡ್ಡಿ, ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ, ಸ್ಥಳೀಯ ಶಾಸಕರು, ಜಿಪಂ, ತಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ದೇಶದಲ್ಲೇ ಪ್ರಥಮವಾಗಿ ಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿಗೊಳಿಸಿದೆ. ಎಸ್ಸಿ-ಎಸ್ಟಿ ವರ್ಗಗಳ ಕಲ್ಯಾಣಕ್ಕೆ ಹೆಚ್ಚಿನ ಹಣ ಮೀಸಲಿಟ್ಟು ದೇಶಕ್ಕೆ ಮಾದರಿಯಾಗಿದೆ.
-ಕೆ.ಎಚ್.ಮುನಿಯಪ್ಪ, ಸಂಸದ
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News