ದಾವಣಗೆರೆ :ದಂಪತಿಗಳ ಸಂಸಾರಿಕ ಬದುಕಿನಲ್ಲಿ ಬಿರುಕು ವಿಷಾಧನೀಯ; ಪಂಡಿತಾರಾಧ್ಯ ಸ್ವಾಮೀಜಿ
ದಾವಣಗೆರೆ,ಡಿ.29 : ಇತ್ತೀಚಿನ ದಿನಗಳಲ್ಲಿ ದಂಪತಿಗಳ ಸಂಸಾರಿಕ ಬದುಕಿನಲ್ಲಿ ಅನ್ಯೋನ್ಯತೆ ಇಳಿಮುಖವಾಗಿ ಜೀವನಗಳು ವಿಭಾಗವಾಗಿ, ಪಂಚಾಯತ್ ಹಂತಕ್ಕೆ ತಲುಪಿ ಸಂಸಾರಗಳು ಬಹುಬೇಗ ಮುರಿದುಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಸಾಣೇಹಳ್ಳಿ ಶಾಖಾಮಠದ ಪಂಡಿತಾರಾಧ್ಯ ಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು.
ಗಾಂಧಿನಗರದಲ್ಲಿ ಶ್ರೀ ಗುರು ರಾಮದಾನ ಆಧ್ಯಾತ್ಮ ಮಂದಿರದ ಟ್ರಸ್ಟ್ ವತಿಯಿಂದ 28ನೇ ವರ್ಷದ ಮಾದಾರ ಚನ್ನಯ್ಯ ಸ್ವಾಮೀಜಿ ಜಯಂತ್ಯುತ್ಸವ, ಗುರು ರಾಮದಾಸ ಮಲ್ಲಯ್ಯ ಸ್ವಾಮೀಜಿ, ಕೊಂಡಯ್ಯ ಸ್ವಾಮೀಜಿ ಪುಣ್ಯಾರಾಧನೆ ಹಾಗೂ 28ನೇ ವರ್ಷದ ಸಾಮೂಹಿಕ ಕಲ್ಯಾಣ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನವ ಜೋಡಿಗಳಲ್ಲಿ ಪರಸ್ಪರ ಹೊಂದಾಣಿಕೆಯಿಂದ ಒಳಗೊಂಡು ತಾಳ್ಮೆ, ಸಹನೆ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅನ್ಯೋನ್ಯತೆಯಿಂದ ಬಾಳಿ ಬದುಕಬೇಕು. ಒಬ್ಬರನ್ನೊಬ್ಬರು ಅರಿತು ಮೇಲು ಕೀಳು ಎನ್ನದೆ ಜೊತೆಗೆ ಹೊಂದಾಣಿಕೆಯಿಂದ ಸುಖ ಸಂಸಾರ ಜೀವನ ನಡೆಸಿ. ಆಗ ಬದುಕು ಸುಖಕರಾಗಲಿದೆ ಎಂದ ಅವರು, ದಾನ ಯಾವುದೇ ಫಲಾಪೇಕ್ಷೆಯನ್ನು ಭಯಸುವುದಿಲ್ಲ. ಅದೇ ರೀತಿಯಲ್ಲಿ ಮತದಾನ ಅಂತಹ ದಾನವಾಗಿ ಉಳಿದಿಲ್ಲ. ಬದಲಾಗಿ ಕೊಳ್ಳುವ ಮತ್ತು ಮಾರಿಕೊಳ್ಳುವ ಸ್ಥಿತಿಗೆ ಬಂದಿದೆ. ಹೀಗಾಗಿ ರಾಜಕೀಯದಲ್ಲಿ ಅರ್ಹರಿಗೆ ಅವಕಾಶ ಸಿಗುತ್ತಿಲ್ಲ. ಸಾರ್ವಜನಿಕರು ಜಾಗೃತರಾಗಬೇಕು. ಅರ್ಹರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.
ಮೌಢ್ಯಗಳಿಂದ ದೂರವಿರಿ: ಧಾರ್ಮಿಕ ಮೌಲ್ಯಗಳು ಜಗತ್ತಿನಲ್ಲಿ ತುಂಬಾ ಅಪಾಯಕಾರಿಯಾಗಿದ್ದು, ಅದರಲ್ಲೂ ಧರ್ಮ, ದೇವರ ಹೆಸರಿನಲ್ಲಿ ಮೌಢ್ಯದಿಂದ ದೂರವಾಗುವುದು ಕಷ್ಟದ ಕೆಲಸ. ಆದರೆ, ಪ್ರಪಂಚದಲ್ಲಿ ಯಾವ ದೇವರು ರಕ್ತಾಭಿಷೇಕ ಬೇಕು ಎಂದು ಬಯಸುವುದಿಲ್ಲ. ಬದಲಾಗಿ ಭಕ್ತಿಯ ಅಭಿಷೇಕ ಬಯಸುತ್ತವೆ. ಹಾಗಾಗಿ ಜನರು ದೇವರ ಹೆಸರಿನಲ್ಲಿ ಕುರಿ, ಕೋಳಿ, ಕೋಣಗಳನ್ನು ಬಲಿ ಕೊಡುವುದನ್ನು ಮೊದಲು ನಿಲ್ಲಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಮಹಾಂತ ರುದ್ರೇಶ್ವರ ಸ್ವಾಮೀಜಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪರಿಶಿಷ್ಠ ಜಾತಿ ಇಲಾಖೆ ಅಧ್ಯಕ್ಷ ಎಫ್.ಎಚ್. ಜಕ್ಕಪ್ಪ, ಬಿ.ವೀರಣ್ಣ, ಎಂ.ಹಾಲೇಶ್, ಬಿ.ಎಚ್.ವೀರಭದ್ರಪ್ಪ, ಇ. ರಮೇಶ್ ಮತ್ತಿತರರು ಇದ್ದರು.