×
Ad

ಎಸೆಸೆಲ್ಸಿ - ಪಿಯುಸಿ ಪರೀಕ್ಷೆಗಳಿಗಾಗಿ ಪ್ರತ್ಯೇಕ ಮಂಡಳಿ: ಸಚಿವ ತನ್ವೀರ್‌ ಸೇಠ್

Update: 2017-12-29 19:54 IST

ಬೆಂಗಳೂರು, ಡಿ.29: ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಿಗಾಗಿ ಪ್ರತ್ಯೇಕ ಮಂಡಳಿ ರಚನೆ ಮಾಡುವ ಕುರಿತು ಸರಕಾರ ಹಾಗೂ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್ ತಿಳಿಸಿದರು.

ಶುಕ್ರವಾರ ವಿಧಾನಸೌಧದಲ್ಲಿ 2018ನೆ ಸಾಲಿನ ಕ್ಯಾಲೆಂಡರ್ ಹಾಗೂ ದಿನಚರಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎಸೆಸೆಲ್ಸಿ ಮಂಡಳಿಯೂ ಕೇವಲ ಪರೀಕ್ಷೆಗಳನ್ನಷ್ಟೇ ನಡೆಸುತ್ತಿದೆ. ಆದರೆ, ಪಿಯುಸಿ ಮಂಡಳಿ ಪರೀಕ್ಷೆ ಜತೆಗೆ ಆಡಳಿತಾತ್ಮಕವಾದ ಕಾರ್ಯಗಳನ್ನು ಮಾಡುತ್ತಿದೆ ಎಂದರು.

ಆಡಳಿತ ಹಾಗೂ ಪರೀಕ್ಷೆಗಳ ವ್ಯವಸ್ಥೆಯು ಪ್ರತ್ಯೇಕವಾಗಿರಬೇಕು ಎಂಬುದು ನಮ್ಮ ಉದ್ದೇಶ. ಪರೀಕ್ಷೆಗಳ ಒತ್ತಡವನ್ನು ನಿವಾರಿಸುವುದು ಅಗತ್ಯ. ಈ ಬಗ್ಗೆ ವರದಿ ನೀಡಲು ಅಧಿಕಾರಿಗಳ ಸಮಿತಿಯನ್ನು ರಚನೆ ಮಾಡಲಾಗಿದೆ. ಈಗಿರುವ ನ್ಯೂನತೆಗಳನ್ನು ಸರಿಪಡಿಸಿ, ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

76 ಸಾವಿರ ಪ್ರಾಥಮಿಕ ಶಾಲೆಗಳು, 5200 ಪದವಿ ಪೂರ್ವ ಕಾಲೇಜುಗಳ 1.20 ಕೋಟಿ ವಿದ್ಯಾರ್ಥಿಗಳಿದ್ದಾರೆ. ಇವುಗಳ ಪರೀಕ್ಷೆಗಳ ನಿರ್ವಹಣೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇಲಾಖೆಯಲ್ಲಿ ಕಾಲಕ್ಕೆ ತಕ್ಕಂತೆ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ತನ್ವೀರ್‌ಸೇಠ್ ತಿಳಿಸಿದರು.

2017ನೆ ಸಾಲಿನ ಎಸೆಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳು ಯಾವುದೇ ಗೊಂದಲಗಳಿಲ್ಲದೆ ನಡೆದಿವೆ. 2018ನೆ ಸಾಲಿನ ಪರೀಕ್ಷೆಗಳನ್ನು ಅದೇ ರೀತಿಯಲ್ಲಿ ನಡೆಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಕ್ಕಳ ಮೇಲಿನ ಪರೀಕ್ಷಾ ಒತ್ತಡಗಳನ್ನು ಕಡಿಮೆ ಮಾಡಲು ನಾಲ್ಕು ತಿಂಗಳ ಮುಂಚಿತವಾಗಿಯೆ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ತನ್ವೀರ್‌ಸೇಠ್ ಹೇಳಿದರು.

ನಮ್ಮ ರಾಜ್ಯದಲ್ಲಿ ಮೊದಲು ‘ನಲಿ-ಕಲಿ’ ಕಲಿಕಾ ಪದ್ಧತಿಯನ್ನು ಆರಂಭಿಸಲಾಯಿತು. ನಂತರ, ತಮಿಳುನಾಡು ಅದೇ ಪದ್ಧತಿಯನ್ನು ಅನುಕರಣೆ ಮಾಡಿದೆ. ಸದ್ಯಕ್ಕೆ ನಲಿ-ಕಲಿ ಪದ್ಧತಿ ರದ್ದು ಮಾಡುವ ಚಿಂತನೆಯಿಲ್ಲ. ಈ ಪದ್ಧತಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅವೈಜ್ಞಾನಿಕ ಎಂದು ಶಿಫಾರಸ್ಸು ಮಾಡಿರುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಆರ್‌ಟಿಇ ನಿಲ್ಲಿಸುವುದಿಲ್ಲ: ಶಿಕ್ಷಣ ಹಕ್ಕು ಕಾಯ್ದೆಯಡಿ ಮಕ್ಕಳ ಪ್ರವೇಶಾತಿಯನ್ನು ನಿಲ್ಲಿಸುವ ಯಾವುದೇ ಉದ್ದೇಶವಿಲ್ಲ. 1-10ನೇ ತರಗತಿಯವರಿಗೆ ಸರಕಾರಿ ಶಾಲೆಗಳಲ್ಲಿ ಶೇ.84ರಷ್ಟು ಹಾಜರಾತಿ ಪ್ರಮಾಣವನ್ನು ನಾವು ಕಾಯ್ದುಕೊಂಡಿದ್ದೇವೆ. ಇನ್ನುಳಿದ ಶೇ.16ರಷ್ಟು ಮಕ್ಕಳು ವಿವಿಧ ಕಾರಣಗಳಿಂದಾಗಿ ಶಾಲೆಯಿಂದ ಹೊರಗಿದ್ದಾರೆ ಎಂದು ಅವರು ಹೇಳಿದರು.

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 23 ಸಾವಿರ ಕಿರಿಯ ಪ್ರಾಥಮಿಕ ಹಾಗೂ 21 ಸಾವಿರ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಪ್ರತಿಯೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 1-12ನೆ ತರಗತಿಯವರಿಗೆ ಒಂದೇ ಆವರಣದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ತನ್ವೀರ್‌ಸೇಠ್ ತಿಳಿಸಿದರು.

2002-12ರವರೆಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಬಳಕೆಯಾಗದ 242 ಕೋಟಿ ರೂ.ಗಳನ್ನು ಶೈಕ್ಷಣಿಕ ಉದ್ದೇಶಗಳಿಗೆ ಬಳಕೆ ಮಾಡುವ ಸಂಬಂಧ ಯೋಜನಾ ಇಲಾಖೆ ಜತೆ ಚರ್ಚೆ ಮಾಡಲಾಗಿದೆ. ಶಿಥಿಲಾವಸ್ಥೆಯಲ್ಲಿರುವ 36 ಸಾವಿರ ಕೊಠಡಿಗಳನ್ನು ನೆಲಸಮಗೊಳಿಸಬೇಕಿದೆ. 31 ಸಾವಿರ ಕೊಠಡಿಗಳ ದುರಸ್ತಿ, 19 ಸಾವಿರ ಕೊಠಡಿಗಳನ್ನು ಹೊಸದಾಗಿ ನಿರ್ಮಿಸಬೇಕಿದೆ. ಈ 242 ಕೋಟಿ ರೂ.ಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು ಎಂದು ಅವರು ಹೇಳಿದರು.

2017ನೆ ಸಾಲಿನ ಕ್ಯಾಲೆಂಡರ್‌ನಲ್ಲಿ ರಾಜ್ಯ ಸರಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. 2018 ಚುನಾವಣಾ ವರ್ಷವಾಗಿರುವುದರಿಂದ ಸರಕಾರಿ ಕಾರ್ಯಕ್ರಮಗಳ ಬದಲು ವನ್ಯಜೀವಿಗಳು ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗಿದೆ. ಇದರಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ಸರಕಾರಿ ಕಚೇರಿಗಳ ದೂರವಾಣಿ ಸಂಖ್ಯೆಗಳನ್ನು ಒದಗಿಸುವ ಪ್ರಯತ್ನ ಮಾಡಲಾಗಿದೆ ಎಂದು ತನ್ವೀರ್‌ಸೇಠ್ ತಿಳಿಸಿದರು.

ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಇಟ್ಟಿರುವವರ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಸಂಬಂಧ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಆದರೆ, ಯಾರ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಮಾತು ಬಂದಿದೆಯೋ ಅವರ ಚಟುವಟಿಕೆಗಳನ್ನು ನಾವು ಗಮಿಸಬೇಕಿದೆ ಎನ್ನುವ ಮೂಲಕ ಎಸ್‌ಡಿಪಿಐ ಜತೆಗಿನ ಹೊಂದಾಣಿಕೆಯನ್ನು ಪರೋಕ್ಷವಾಗಿ ತನ್ವೀರ್ ಸೇಠ್ ವಿರೋಧಿಸಿದರು.

ತ್ರಿವಳಿ ತಲಾಕ್ ಮಸೂದೆಗೆ ವಿರೋಧ
ಕೇಂದ್ರ ಸರಕಾರವು ಲೋಕಸಭೆಯಲ್ಲಿ ಮಂಡನೆ ಮಾಡಿ ಅನುಮೋದನೆ ಪಡೆದುಕೊಂಡಿರುವ ತ್ರಿವಳಿ ತಲಾಕ್‌ಗೆ ಸಂಬಂಧಿಸಿದ ಮಸೂದೆಗೆ ನನ್ನ ವಿರೋಧವಿದೆ. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡಿದೆ. ತಲಾಕ್(ವಿಚ್ಛೇದನ) ವೈಯಕ್ತಿಕ ವಿಚಾರ. ಅದನ್ನೆಲ್ಲ ಕಾನೂನು ಮಾಡುವುದು ಸರಿಯಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮುದಾಯದ ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸಿ ಕೇಂದ್ರ ಸರಕಾರಕ್ಕೆ ಕಳುಹಿಸಿಕೊಡಲಾಗುವುದು.
-ತನ್ವೀರ್ ಸೇಠ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News