×
Ad

ಕನ್ನಡದ ಗೀತೆಗಳಿಗೆ ವಿಶ್ವಮಾನ್ಯತೆ ದೊರಕಿಸಿಕೊಟ್ಟ ಸ್ವರಮಾಂತ್ರಿಕ ಸಿ.ಅಶ್ವತ್: ಎಸ್.ಎಸ್.ವೆಂಕಟೇಶ್

Update: 2017-12-29 20:03 IST

ಚಿಕ್ಕಮಗಳೂರು, ಡಿ.29:  ಸಮಾನತೆಯ ಪರಿಕಲ್ಪನೆಯ ಮೂಲಕ ಸಮಾಜ ಪರಿವರ್ತನೆಗೆ ರಸಋಷಿ ಕುವೆಂಪು ಶ್ರಮಿಸಿದರೆ,  ಕನ್ನಡದ ಗೀತೆಗಳಿಗೆ ವಿಶ್ವಮಾನ್ಯತೆ ದೊರಕಿಸಿಕೊಟ್ಟ ಸ್ವರಮಾಂತ್ರಿಕ ಸಿ.ಅಶ್ವತ್ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾಧ್ಯಕ್ಷ ಎಸ್.ಎಸ್.ವೆಂಕಟೇಶ್ ಬಣ್ಣಿಸಿದರು.

ಅವರು ಶುಕ್ರವಾರ ಸುಗಮ ಸಂಗೀತ ಗಂಗಾ ಮತ್ತು ಮಲ್ಲಿಗೆ ಸುಗಮ ಸಂಗೀತ ಟ್ರಸ್ಟ್ ಬಿಜಿಎಸ್ ಪಿಯು ಕಾಲೇಜಿನಲ್ಲಿ ಕುವೆಂಪು ಮತ್ತು ಸಿ.ಅಶ್ವತ್‍ರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ‘ನುಡಿನಮನ-ಕಾವ್ಯಗಾಯನ’ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಉಪನ್ಯಾಸ ನೀಡಿದರು. ಶ್ರೇಷ್ಠ ಸಮಾಜ ಸುಧಾರಕರ ಸಾಲಿಗೆ ಸೇರುವ ರಾಷ್ಟ್ರಕವಿ ಕುವೆಂಪು ದಾರ್ಶನಿಕತೆ ಮತ್ತು ವಿಜ್ಞಾನ ಮೇಳೈಸಬೇಕೆಂದು ಪ್ರತಿಪಾದಿಸಿದವರು. 

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕಾಲಘಟ್ಟವನ್ನು ಹೇಳುವಾಗ ಪಂಪನಿಂದ ಕುವೆಂಪುವರೆಗೆ ಎಂದು ಗುರುತಿಸಲಾಗುವುದು.  ಕೊಪ್ಪ ತಾಲ್ಲೂಕಿನ ಹಿರೇಕೂಡಿಗೆಯಲ್ಲಿ ಹುಟ್ಟಿ ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಮೈಸೂರಿನಲ್ಲಿ ಕಾಲೇಜುಶಿಕ್ಷಣದ ನಂತರ ಅಲ್ಲೆ ಉಪನ್ಯಾಸಕ, ಪ್ರಾಂಶುಪಾಲ, ಕುಲಪತಿಯಾಗಿ ಬೆಳಗಿದ ಮೇರು ಪ್ರತಿಭೆ.

ಮಲೆನಾಡಿನ ನೈಜಚಿತ್ರಣ-ಸಂಸ್ಕøತಿ-ಮುಗ್ಧ ಬದುಕನ್ನು ಹೊರಜಗತ್ತಿಗೆ ತೆರೆದಿಟ್ಟವರು ಕುವೆಂಪು ಪರೀಕ್ಷೆ-ವಿಮರ್ಶೆ-ವಿಚಾರ ನಮ್ಮ ಜನ್ಮಸಿದ್ಧ ಹಕ್ಕೆಂದು ಪ್ರತಿಪಾದಿಸಿದ್ದರು.  ರೈತನನ್ನು ನೇಗಿಲಯೋಗಿ ಎಂದು ಗೌರವಿಸಿದವರು.  ಅವರ ವೈಚಾರಿಕತ್ವ ಸಾರ್ವಕಾಲೀಕ ಮೌಲ್ಯ ಹೊಂದಿದ್ದು,  ವಿಚಾರಕ್ರಾಂತಿಗೆ ಪ್ರೇರಣ ನೀಡಿತ್ತೆಂದು ವೆಂಕಟೇಶ್ ನುಡಿದರು.

ಕನ್ನಡ ಗೀತೆಗಳನ್ನು ಮಾಧುರ್ಯದಿಂದ ಹಾಡಿ ಮನೆ-ಮನಗಳಿಗೆ ತಲುಪಿಸಿದ ಖ್ಯಾತ ಹಾಡುಗಾರ, ಸಂಗೀತ ನಿರ್ದೇಶಕ ಡಾ||ಸಿ.ಅಶ್ವತ್ ವಚನ-ದಾಸರ ಪದಗಳನ್ನು ವಿಭಿನ್ನವಾಗಿ ಹಾಡಿ ತೋರಿಸಿದವರು. ಕನ್ನಡಗೀತೆಗಳಿಗೆ ಲಕ್ಷಾಂತರ ಜನ ಸೇರುತ್ತಾರೆಂಬುದನ್ನು ಸಾಬೀತು ಪಡಿಸಿದ ಸ್ವರಮಾಂತ್ರಿಕ ಇದೇ ದಿನಾಂಕದಂದು ಜನಿಸಿ ನಿಧನ ಹೊಂದಿದ್ದು ವಿಶೇಷ ಎಂದು ಗಾಯಕರೂ ಆದ ವೆಂಕಟೇಶ್ ನುಡಿದರು.

ಎಐಟಿಪ್ರಾಂಶುಪಾಲ ಡಾ||ಸಿ.ಕೆ.ಸುಬ್ರಾಯ ವಿಶ್ವಮಾನವ ಸಂದೇಶದ ಕಿರುಹೊತ್ತಿಗೆ ಲೋಕಾರ್ಪಣೆಗೊಳಿಸುವ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿ, 20ನೆಯ ಶತಮಾನದ ಮೇರುಪ್ರತಿಭೆಗಳಾದ ಕುವೆಂಪುರ ಸಾಹಿತ್ಯ, ಅಶ್ವತ್ ಅವರ ಹಾಡು ಯುಗಗಳ ಕಾಲ ಮರೆಯಲಾಗದೆಂದರು.  

ಸಾಹಿತ್ಯ ಮತ್ತು ಸಂಗೀತ ಖುಷಿಕೊಡುತ್ತದೆ.  ನಮ್ಮೆಲ್ಲ ನೋವು-ದುಃಖಗಳನ್ನು ಮರೆಸಿ ಹೊಸ ಉತ್ಸಾಹವನ್ನು ತುಂಬುತ್ತವೆ. ‘ಓದುವಂತಹದ್ದನ್ನು ಬರೆಯಬೇಕು. ಬರೆಯುವಂತಹ ಕಾರ್ಯವನ್ನು ಮಾಡಬೇಕು’ ಎಂಬ ಪ್ರಸಿದ್ಧಉಕ್ತಿಯಂತೆ ಬದುಕಿದ ಮಹಾನ್‍ ಚೇತನಗಳೆಂದ ಡಾ||ಸುಬ್ರಾಯ, ಪ್ರತಿಯೊಬ್ಬರಲ್ಲೂ ಒಂದಿಲ್ಲೊಂದು ಪ್ರತಿಭೆ ಇರುತ್ತದೆ. ಆಸಕ್ತಿ, ಧೈರ್ಯ, ಸ್ಥೈರ್ಯ, ಪೂರಕ ವ್ಯವಸ್ಥೆಯಿಂದ ಪ್ರತಿಭೆ ಬೆಳಗಿಸಬಹುದೆಂದರು.

ಬಿಜಿಎಸ್ ಪ್ರಾಂಶುಪಾಲ ಜೆ.ಬಿ.ಸುರೇಂದ್ರ ಸಮಾರಂಭದ ಅಧ್ಯಕ್ಷತೆವಹಿಸಿ ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ಸದಭಿರುಚಿಯ ಸಂಗೀತಸುಧೆ ಪರಿಚಯಿಸುವ ಕಾರ್ಯಕ್ರಮಗಳು ಉಪಯುಕ್ತವೆಂದರು.

ಸುಗಮ ಸಂಗೀತಗಂಗಾ ಕಾರ್ಯದರ್ಶಿ ಮಂಜುನಾಥ ಕಾಮತ್ ಸ್ವಾಗತಿಸಿ ಪ್ರಾಸ್ತಾವಿಸಿದ್ದು, ಉಪನ್ಯಾಸಕ ರಂಗಸ್ವಾಮಿ ವಂದಿಸಿದರು.  ಎನ್.ಆರ್.ಸಂತೋಷ್ ನಿರೂಪಿಸಿದರು.  ಮುಖ್ಯಶಿಕ್ಷಕ ಚಂದ್ರಶೇಖರ್, ಗೌರವಸಲಹೆಗಾರ ಡಾ||ಎಸ್.ಆರ್.ವೈದ್ಯ ವೇದಿಕೆಯಲ್ಲಿದ್ದರು.  ಸುಗಮ ಸಂಗೀತಗಂಗಾ ಗಾಯಕರುಗಳಾದ ರೇಖಾಪ್ರೇಂಕುಮಾರ್, ಎಂ.ಎಸ್.ಸುಧೀರ್, ಮಲ್ಲಿಗೆಸುಧೀರ್, ರೂಪಾಅಶ್ವಿನ್, ಸುಮಾಪ್ರಸಾದ್, ಅಭಿಷೇಕ್ ತಂಡದ ಕಾವ್ಯಗಾಯನ ಗಮನ ಸೆಳೆಯಿತು. ವಿದ್ಯಾರ್ಥಿಗಳಿಗಾಗಿ ಗಾಯನ ಶಿಬಿರ ಮಲ್ಲಿಗೆಸುಧೀರ್ ನೇತೃತ್ವದಲ್ಲಿ ನಡೆದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News