ಮೂರು ಸಾವಿರ ಮಠದಲ್ಲಿ ವೀರಶೈವ-ಲಿಂಗಾಯತ ಧರ್ಮ ಚರ್ಚೆ : ಅನುಮತಿ ನಿರಾಕರಿಸಿದ ಪೊಲೀಸ್ ಇಲಾಖೆ
Update: 2017-12-29 20:18 IST
ಹುಬ್ಬಳ್ಳಿ, ಡಿ.29: ವೀರಶೈವ-ಲಿಂಗಾಯತ ಧರ್ಮ ಚರ್ಚೆಗೆ ನಗರದ ಮೂರುಸಾವಿರ ಮಠದಲ್ಲಿ ವೇದಿಕೆ ಸಿದ್ಧವಾಗಿದೆ. ಆದರೆ, ಮಠದಲ್ಲಿ ಚರ್ಚೆಗೆ ಪೊಲೀಸ್ ಇಲಾಖೆ ನಿರಾಕರಿಸಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ್ ಆದೇಶ ಹೊರಡಿಸಿದ್ದಾರೆ.
ಹೀಗಾಗಿ ತೀವ್ರ ಕುತೂಹಲ ಮೂಡಿಸಿದ್ದ ಲಿಂಗಾಯತ-ವೀರಶೈವ ಚರ್ಚೆಗೆ ಮೊದಲ ಹಂತದಲ್ಲಿಯೇ ಹಿನ್ನಡೆಯಾಗಿದೆ. ಹೊಸ ವರ್ಷದ ಭದ್ರತೆ, ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ. ಅದಲ್ಲದೆ ಮೂರು ಸಾವಿರ ಮಠದ ಟ್ರಸ್ಟ್ ಕೂಡ ಚರ್ಚೆಗೆ ಅನುಮತಿ ನೀಡಿಲ್ಲ ಎನ್ನಲಾಗಿದೆ.
ಚರ್ಚೆಗೆ ಅನುಮತಿ ಕೋರಿ ಪೊಲೀಸ್ ಭದ್ರತಾ ಇಲಾಖೆಗೆ ಎರಡೂ ಬಣದವರು ಮನವಿ ಸಲ್ಲಿಸಿದ್ದು, ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ನಾವು ಚರ್ಚೆಗೆ ಅವಕಾಶ ನಿರಾಕರಿಸಿದ್ದೇವೆ. ಅದನ್ನೂ ಮೀರಿ ನಾಳೆ ಅಲ್ಲಿ ಜನ ಸೇರಿದರೆ ಸೆ. 144 ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.