ಕೋಲಾರ: ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಕೋಲಾರ,ಡಿ.29: ಮುಖ್ಯಮಂತ್ರಿ ಸಿದ್ಧರಾಮಯ್ಯ ಕೋಲಾರ ಜಿಲ್ಲೆಯಲ್ಲಿ ಡಿಸೆಂಬರ್ 30 ರಂದು ಶ್ರೀನಿವಾಸಪುರ, ಮುಳಬಾಗಿಲು ಮತ್ತು ಬಂಗಾರಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಸಾಧನಾ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನ ಲೋಕಾರ್ಪಣೆ ಮಾಡಲಿದ್ದಾರೆ. ಮುಖ್ಯಮಂತ್ರಿಯವರ ಆಗಮನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಕೆ.ಪಿ.ಸಿ.ಸಿ. ಡಾ. ಜಿ.ಪರಮೇಶ್ವರ್ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರತ್ಯೇಕವಾಗಿ ಪ್ರವಾಸ ಆರಂಭಿಸಿದ್ದಾರೆ. ಕರ್ನಾಟಕ ಮೂಡಲಬಾಗಿಲು ಆದ ಮುಳಬಾಗಿಲಿನಿಂದ ಕಳೆದ ವಾರ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಚುನಾವಣಾ ಪ್ರಚಾರ ಆರಂಭಿಸಿದ್ದರು. ಪರಮೇಶ್ವರ್ ಪ್ರವಾಸದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೋಲಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಡಿಸೆಂಬರ್ 30 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀನಿವಾಸಪುರಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಶ್ರೀನಿವಾಸಪುರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಲೋಕಾರ್ಪಣೆ ಮಾಡಿದ ನಂತರ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀನಿವಾಸಪುರದಲ್ಲಿ 300 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕು ಸ್ಥಾಪನೆ ಮಾಡಲಿದ್ದಾರೆ.
ಆನಂತರ ಮುಳಬಾಗಿಲು ನಗರದಲ್ಲಿ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.ಮುಖ್ಯಮಂತ್ರಿಗಳ ಆಗಮನದ ಹಿನ್ನಲೆಯಲ್ಲಿ ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೊತ್ತೂರು ಜಿ.ಮಂಜುನಾಥ್ ಕಳೆದ ಚುನಾವಣೆಯಲ್ಲಿ ಪ್ರಣಾಳಿಕೆಯಲ್ಲಿ ಘೋಷಣೆಯಾಗಿದ್ದ 165 ಕಾರ್ಯಕ್ರಮಗಳ ಪೈಕಿ ಈಗಾಗಲೇ 160 ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು 170 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ವೇಳೆ ಪಕ್ಷದ ಸಾಧನೆಗಳನ್ನು ಜನರಿಗೆ ತಿಳಿಸಲಾಗುವುದು. ಮುಳಬಾಗಿಲಿನಿಂದ ಪ್ರಚಾರ ಆರಂಭಿಸಿದರೆ ಗೆಲುವು ಖಚಿತವೆಂದು ಮುಳಬಾಗಿಲು ಶಾಸಕ ಜಿ.ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದರು.
ಮುಳಬಾಗಿಲಿನಿಂದ ಬಂಗಾರಪೇಟೆಗೆ ಆಗಮಿಸಿ ಸುಮಾರು 200 ಕೋಟಿ ರೂಪಾಯಿ ರಸ್ತೆ ಮತ್ತು ಕಟ್ಟಡಗಳ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಲಿದ್ದಾರೆ. 100 ಕೋಟಿ ರೂಪಾಯಿ ಮುಖ್ಯಮಂತ್ರಿಗಳು ನವಕರ್ನಾಟಕ ನಿರ್ಮಾಣಕ್ಕಾಗಿ ಮುಂದಾಗಿದ್ದಾರೆ. ಹೊಸ ಹುರುಪಿನಲ್ಲಿ ಮುಖ್ಯಮಂತ್ರಿಗಳು ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದ ನಂತರ ಬೆಂಗಳೂರಿಗೆ ರಸ್ತೆ ಮೂಲಕ ಪ್ರಯಾಣ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಬಂಗಾರಪೇಟೆಯಲ್ಲಿ ಮುಖ್ಯಮಂತ್ರಿಗಳು ಹೊಸ ಕೆ.ಜಿ.ಎಫ್ ತಾಲ್ಲೂಕು ಕಾರ್ಯಾರಂಭಕ್ಕೆ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಲಿದ್ದಾರೆ. ಪ್ರತಿಪಕ್ಷಗಳಿಗೆ ಸಡ್ಡು ಹೊಡೆಯುವಂತೆ ಕಾಂಗ್ರೆಸ್ ಚುನಾವಣಾ ಪ್ರಚಾರ ಆರಂಭಿಸಿದೆ.