ಗುಂಡ್ಲುಪೇಟೆ :ಹೋಬಳಿ ಮಟ್ಟದಲ್ಲೂ ಪ್ರಥಮ ದರ್ಜೆ ಕಾಲೇಜು; ಡಾ. ಗೀತಾ
ಗುಂಡ್ಲುಪೇಟೆ,ಡಿ.30: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉನ್ನತ ಶಿಕ್ಷಣದ ಅವಕಾಶ ಸಿಗುವುದಕ್ಕಾಗಿ ಪ್ರಥಮದರ್ಜೆ ಕಾಲೇಜುಗಳನ್ನು ಹೋಬಳಿ ಮಟ್ಟದಲ್ಲೂ ಸ್ಥಾಪನೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಗೀತಾ ಮಹದೇವ ಪ್ರಸಾದ್ ಅವರು ತಿಳಿಸಿದರು.ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಈ ಮೊದಲು ಗ್ರಾಮೀಣ ಪ್ರದೇಶದಲ್ಲಿ ಕೇವಲ ಪ್ರಾಥಮಿಕ ಶಾಲೆಗಳು ಮಾತ್ರ ಇದ್ದು, ಮುಂದಿನ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಹತ್ತಾರು ಮೈಲಿ ದೂರ ಪ್ರಯಾಣಿಸಿ ಪಟ್ಟಣದ ಕಾಲೇಜುಗಳಿಗೆ ಹೋಗಬೇಕಾಗಿತ್ತು. ಇದರಿಂದ ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಇದನ್ನು ಮನಗಂಡಿರುವ ಕಾಂಗ್ರೆಸ್ ಸರ್ಕಾರಹೋಬಳಿ ಮಟ್ಟದಲ್ಲೂ ಪ್ರಥಮ ದರ್ಜೆಯ ಕಾಲೇಜನ್ನು ಸ್ಥಾಪನೆ ಮಾಡುತ್ತಿದೆ. ಅದರಲ್ಲೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ ಮಹದೇವ ಪ್ರಸಾದ್ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರ ಫಲವಾಗಿ ಇಂದು ಎಲ್ಲ ಕಡೆಯಲ್ಲೂ ಶಾಲೆ-ಕಾಲೇಜು, ತಾಂತ್ರಿಕ ಕಾಲೇಜುಗಳು ಸ್ಥಾಪನೆಯಾಗಿವೆ ಎಂದರು.
ಸುಮಾರು ಮೂರು ಕೋಟಿ ವೆಚ್ಚದಲ್ಲಿ ಕಟ್ಟುತ್ತಿರುವ ಕಾಲೇಜು ಕಟ್ಟಡವನ್ನು ಆಧುನಿಕವಾಗಿ ನಿರ್ಮಾಣ ಮಾಡಬೇಕು ಹಾಗೂ ಗುಣಮಟ್ಟದ ಕಾಮಗಾರಿ ಮಾಡಬೇಕು ಎಂದು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸಚಿವರು ಸೂಚನೆ ನೀಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್, ಎಪಿಎಂಸಿ ಅಧ್ಯಕ್ಷ ಬಿ.ಕೆ.ಶಿವಪ್ಪ, ಜಿಪಂ ಸದಸ್ಯೆ ಅಶ್ವಿನಿ, ತಾಪಂ ಸದಸ್ಯ ಮಂಡಿ ಮಹೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಬಿ.ರಾಜಶೇಖರ್ ಮತ್ತಿತರರು ಹಾಜರಿದ್ದರು.