×
Ad

ಬುದ್ದಿವಂತ ಗ್ರಾಹಕ ದೇಶದ ಆಸ್ತಿ: ಹೆಚ್.ಎಸ್. ರುದ್ರಪ್ಪ

Update: 2017-12-30 20:28 IST

ಚಿಕ್ಕಮಗಳೂರು, ಡಿ.30: ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆಯಲ್ಲಿ ಗ್ರಾಹಕರು ಎಚ್ಚರಿಕೆಯಿಂದ ವ್ಯವಹಾರ ನಡೆಸಬೇಕು. ಬುದ್ದಿವಂತ ಗ್ರಾಹಕ ದೇಶದ ಆಸ್ತಿಯಿದ್ದಂತೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮಾಜಿ ಅಧ್ಯಕ್ಷ ಹೆಚ್.ಎಸ್. ರುದ್ರಪ್ಪ ಅವರು ಹೇಳಿದರು.

ಅವರು ಶನಿವಾರ ಜಿಲ್ಲಾಡಳಿತ, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಜಿಲ್ಲಾ ವಕೀಲರ ಸಂಘ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವತಿಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಡಿಜಿಟಲ್ ಮಾರುಕಟ್ಟೆ ಬೃಹದಾಕಾರವಾಗಿ ಬೆಳೆದಿದೆ, ಇದು ವರವೋ ಶಾಪವೋ ಎಂಬ ಜಿಜ್ಞಾಸೆಯಾಗಿ ಉಳಿದಿದ್ದರೂ ಕೂಡ ಗ್ರಾಹಕರು ಎಚ್ಚರಿಕೆಯಿಂದ ವ್ಯವಹಾರ ನಡೆಸಿದಾಗ ಮಾತ್ರ ಅದು ಮನುಕುಲಕ್ಕೆ ವರವಾಗಿ ಪರಿಣಮಿಸಲಿದೆ ಎಂದು ಹೇಳಿದ ಅವರು ಗ್ರಾಹಕ ಮತ್ತು ಡಿಜಿಟಲ್ ಮಾರುಕಟ್ಟೆ ಒಂದೇ ನಾಣ್ಯದ ಎರಡು ಮುಖಗಳು ಎಂದು ಹೇಳಿದರು.

ಪೂರ್ವಜರ ಕಾಲದಲ್ಲಿ ಮನುಷ್ಯರು ಗೆಡ್ಡೆ ಗೆಣಸುಗಳನ್ನು ತಿನ್ನುತ್ತಿದ್ದರು, ಅಂದು ಜೀವಿಸುವ ಉದ್ದೇಶದಿಂದ ಆಹಾರ ಪದಾರ್ಥಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ನಂತರದಲ್ಲಿ ಆಸೆ, ಆಕಾಂಕ್ಷೆ, ಸಮೃದ್ದಿ ಜೀವನ ನಡೆಸುವ ಉದ್ದೇಶದಿಂದ ಹಣ ಚಲಾವಣೆಯೊಂದಿಗೆ ಮಾರುಕಟ್ಟೆ ವ್ಯವಸ್ಥೆ ಬಂದಿತು, ಇಂದು ಡಿಜಿಟಲ್ ಮಾರುಕಟ್ಟೆ ವ್ಯವಸ್ಥೆ ಬಂದಿರುವುದರಿಂದ ಸಮಾಜದಲ್ಲಿ ಗ್ರಾಹಕರಿಗೆ ಮೋಸ ಮಾಡುವ ವಂಚನೆಯ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ, ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕಠಿಣ ಕಾನೂನು ಜಾರಿಗೆ ತರಬೇಕು ಮತ್ತು ಗ್ರಾಹಕರಿಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ತಪ್ಪಿತಸ್ಥ ವಿತರಕರನ್ನು ಶಿಕ್ಷಿಸುವ ಮತ್ತು ಗ್ರಾಹಕರ ಹಿತರಕ್ಷಣೆ ಕಾಪಾಡುವ ಉದ್ದೇಶದಿಂದ1986 ಡಿಸೆಂಬರ್ 24ರಲ್ಲಿ ಗ್ರಾಹಕ ಸಂರಕ್ಷಣಾ ಕಾಯಿದೆ ಜಾರಿಗೆ ತರಲಾಯಿತು. ಡಿಸೆಂಬರ್ ತಿಂಗಳಿನಲ್ಲಿ ಗ್ರಾಹಕರ ದಿನಾಚರಣೆ ಹಾಗೂ ಮಾರ್ಚ್ ತಿಂಗಳಲ್ಲಿ ಗ್ರಾಹಕರ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಮಾತನಾಡಿ, ವ್ಯಾಪಾರಿ ಮತ್ತು ಗ್ರಾಹಕರ ನಡುವೆ ಉತ್ತಮ ಸಂಬಂಧವಿದ್ದರೆ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ವ್ಯಾಪಾರಿಯೂ ಕೂಡ ಒಂದು ರೀತಿಯಲ್ಲಿ ಗ್ರಾಹಕನಾಗಿರುತ್ತಾನೆ ಆದುದರಿಂದ ಗ್ರಾಹಕರಿಗೆ ಸರಕು ಮತ್ತು ಸೇವೆಗಳ ಕುರಿತು ಮಾಹಿತಿ ಸಿಗಬೇಕು, ಜನಸಾಮಾನ್ಯರೂ ಡಿಜಿಟಲ್ ಮಾರುಕಟ್ಟೆಯಲ್ಲಿ ಆರ್ಥಿಕ ವ್ಯವಹಾರಗಳನ್ನು ನಡೆಸಲು ಅರಿವು ಹೊಂದಬೇಕು ಎಂದು ಹೇಳಿದರು.

ಆರ್ಥಿಕ ವ್ಯವಸ್ಥೆ ಉತ್ತಮವಾಗಿರಬೇಕು ಎಂದರೆ ಗ್ರಾಹಕರು ಮತ್ತು ವ್ಯಾಪಾರಿಗಳ ನಡುವೆ ಸೇವೆ ಆಗಿರಬಹುದು ಅಥವಾ ಸರಕುಗಳಾಗಿರಬಹುದು ಆ ನಡುವಿನ ಸಂಬಂಧ ಉತ್ತಮವಾಗಿದ್ದರೆ ಮಾತ್ರ ಗುಣಮಟ್ಟದ ಆರ್ಥಿಕ ಸ್ಥಿತಿ ಹೊಂದಲು ಸಾಧ್ಯವಾಗುತ್ತದೆ. ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ಥರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಎಂಬ ವಿಷಯದ ಕುರಿತು ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ರಾಘವೇಂದ್ರ ಎಂ. ರಾಯ್ಕರ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಟಿ.ದುಶ್ಯಂತ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಎ.ಎಸ್. ಮಹೇಶ್ವರಪ್ಪ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News