ಬಿಜೆಪಿ-ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ಬರಲು ಬಿಡಬಾರದು; ಜೆಡಿಎಸ್ ಮುಖಂಡ ಬಿ.ಎ.ಜೀವಿಜಯ
ಸುಂಟಿಕೊಪ್ಪ,ಡಿ.30: ಆಡಳಿತಶಾಹಿ ವ್ಯವಸ್ಥೆಯಲ್ಲಿ ನಡೆಯುತಿರುವ ಭ್ರಷ್ಟಾಚಾರವನ್ನು ತೊಲಗಿಸಿ ಬಡ ವರ್ಗದವರಿಗೆ ನ್ಯಾಯಯುತವಾಗಿ ಸಲ್ಲಿಸಬೇಕಾದ ಮೂಲಭೂತ ಸೌಲಭ್ಯ ಸಿಗಬೇಕಾದರೆ ಸರಕಾರದ ಬದಲಾವಣೆಯ ಅವಶ್ಯಕತೆ ಇದೆ ಎಂದು ಮಾಜಿ ಸಚಿವರೂ ಜೆಡಿಎಸ್ ಮುಖಂಡರಾದ ಬಿ.ಎ.ಜೀವಿಜಯ ಪ್ರತಿಪಾದಿಸಿದರು.
ಮಾದಾಪುರದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಬ್ಯಾಂಕ್‍ನ ಸಭಾಂಗಣದಲ್ಲಿ ಹೋಬಳಿ ಮಟ್ಟದ ಜಾತ್ಯಾತೀತ ಜನತಾದಳ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ರಾಜ್ಯದಲ್ಲಿ ಪ್ರಸ್ತುತ ಕಂಡು ಬರುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ. ಮಹದಾಯಿ ಕುಡಿಯುವ ನೀರಿನ ಬಗ್ಗೆ ಬಿಜೆಪಿ, ಕಾಂಗ್ರೆಸ್ ನಾಟಕ ಮಾಡುತ್ತಾ ಜನರನ್ನು ವಂಚಿಸುತ್ತಿದೆ ಎಂದು ಆರೋಪಿಸಿದರು.
ಬಡವರಿಗೆ ಆಶ್ರಯ ವಸತಿ ಯೋಜನೆಗೆ ಹಾಗೂ 94ಸಿ ಹಕ್ಕುಪತ್ರ ಪಡೆಯಲು ಅಧಿಕಾರಿಗಳು 25,000 ರೂ ವರೆಗೆ ಲಂಚ ಪಡೆಯುತ್ತಿದ್ದಾರೆ. ಬಡವರು ಎಲ್ಲಿಂದ ಕೊಡುವುದು ಹಣ? ಅಧಿಕಾರಿಗಳು ಲಂಚ ಪಡೆಯುತ್ತಿರುವುದು ಎಂ.ಪಿ.,ಎಂಎಲ್‍ಎ, ಜಿ.ಪಂ.ಸದಸ್ಯರಿಗೆ ಗೊತ್ತಿಲ್ಲವೇ? ಏಕೆ ಕಡಿವಾಣ ಹಾಕುತ್ತಿಲ್ಲ ? ಈ ಜನಪ್ರತಿನಿಧಿಗಳ ಸಹಾಯದಿಂದಲೇ ಅಧಿಕಾರಿಗಳು ಲಂಚ ಪಡೆಯುತ್ತಿದ್ದಾರೆ ಎಂದು ಜೀವಿಜಯ ಗಂಭೀರ ಆರೋಪ ಮಾಡಿದರು.
ಬಿಜೆಪಿ-ಕಾಂಗ್ರೆಸ್ ಸರಕಾರವನ್ನು ಅಧಿಕಾರಕ್ಕೆ ಬರಲು ಬಿಡಬಾರದು. ಕಾರ್ಯಕರ್ತರೆ ನಮ್ಮ ಪಕ್ಷದ ಅಸ್ತಿ. ಮನೆ ಮನೆಗೆ ತೆರಳಿ ಜೆಡಿಎಸ್ ಅಧಿಕಾರಕ್ಕೆ ಬರಲು ಶ್ರಮಿಸಬೇಕು ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಬೇಕು ಹಾಗೂ ರಾಜ್ಯದಲ್ಲಿ ಬದಲಾವಣೆಯಾಗಬೇಕು ಎಂದರು.
ಜಾಹೀರಾತಿನ ಹಣ ಯಾರದು? ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಪ್ರತಿದಿನ ಪತ್ರಿಕೆ, ದೃಶ್ಯಮಾಧ್ಯಮಗಳಲ್ಲಿ ಸರಕಾರದ ಸಾಧನೆ ಬಗ್ಗೆ ಜಾಹೀರಾತು ನೀಡುತ್ತಿದ್ದಾರೆ. ಈ ಹಣ ಯಾರದು? ನಮ್ಮ ತೆರಿಗೆ ಹಣದಿಂದ ವರ್ಷಕ್ಕೆ 600ಕೋಟಿ ರೂ ಜಾಹೀರಾತಿಗೆ ವೆಚ್ಚ ಮಾಡುತ್ತಿದೆ. ಇದರಿಂದ ಅಭಿವೃದ್ಧಿ ಕಾರ್ಯ ಕುಂಠಿತವಾಗಿದೆ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ತಾಕತ್ತಿದ್ದರೆ ಸಂವಿಧಾನ ಬದಲಿಸಲಿ. ಭಾರತದ ಸಂವಿಧಾನ ಅತೀ ಶ್ರೇಷ್ಠವಾದುದು ಎಂದು ಹೇಳಿದರು.
ಕೊಡಗು ಜೆಡಿಎಸ್ ಪಕ್ಷದ ಅಧ್ಯಕ್ಷ ಸಂಕೇತ ಪೂವಯ್ಯ ಮಾತನಾಡಿ, ಸ್ಥಳೀಯ ಶಾಸಕರಿಂದ ಅಭಿವೃದ್ಧಿ ಕಾರ್ಯ ಆಗಿಲ್ಲ. ಶಾಶಸಕರು ನಿಷ್ಕ್ರೀಯರಾಗಿದ್ದಾರೆ. ಮತದಾರರು ಜೀವಿಜಯ ಅವರ ಗೆಲುವಿಗೆ ಹಾತೊರೆಯುತ್ತಿದ್ದಾರೆ. ಕಾರ್ಯಕರ್ತರು ಪಕ್ಷದ ಸಂಘಟನೆಗೆ ತೊಡಗಿಸಿಕೊಳ್ಳಬೇಕು. ಬಿಜೆಪಿಯವರು ಮತವನ್ನು ಮೈಲಿಗೆ ಮಾಡುತ್ತಾ ಜನರನ್ನು ತಪ್ಪು ದಾರಿಗೆ ಎಳೆದು ವೋಟು ಪಡೆಯುತ್ತಿರುವ ಬಗ್ಗೆ ಎಚ್ಚರ ವಹಿಸಬೇಕು. ಜೀವಿಜಯ ಅವರ ಅಭಿಮಾನಿಗಳ 30,000 ಮತಗಳು ಗಟ್ಟಿಯಾಗಿದ್ದು, ಉಳಿದ ಮತ ಗಿಟ್ಟಿಸಿಕೊಳ್ಳಲು ಕಾರ್ಯಕರ್ತರು ಶ್ರಮಿಸಬೇಕೆಂದರು.
ರಾಜ್ಯ ಜೆಡಿಎಸ್‍ನ ಪರಿಶಿಷ್ಟ ಪಂಗಡದ ಉಪಾಧ್ಯಕ್ಷ ರಾಜಾರಾವ್ ಮಾತನಾಡಿ, ಬಿಜೆಪಿ ಕಾಂಗ್ರೆಸ್ ಸರಕಾರದಿಂದ ಜನರು ಬೇಸತ್ತಿದ್ದು, ಕುಮಾರಸ್ವಾಮಿ ನೇತೃತ್ವದ ಸರಕಾರ ಬರಬೇಕಾಗಿದ. ಜೀವಿಜಯ ಅವರು ಕನಿಷ್ಠ 1000 ವೋಟಿನಿಂದಲಾದರೂ ಗೆಲ್ಲುತ್ತಾರೆ ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಸಾಕ್‍ಖಾನ್, ಮಡಿಕೇರಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಾರ್ಯದರ್ಶಿ ಡಿ.ಎಸ್.ಚಂಗಪ್ಪ, ಜಿಲ್ಲಾ ಯುವ ಜನತಾದಳದ ಅಧ್ಯಕ್ಷ ಸಿ.ಎಲ್.ವಿಶ್ವ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೊಡಗಿನ ಉಸ್ತುವಾರಿ ಮನೋಜ್ ಬೋಪಯ್ಯ, ಮಾದಾಪುರ ಗ್ರಾ.ಪಂ.ಸದಸ್ಯರುಗಳಾದ ಎಂ.ಎಂ.ಬೆಳ್ಯಪ್ಪ, ಪ್ರಸನ್ನ ಕುಮಾರ, ಮಾದಾಪುರ ಜೆಡಿಎಸ್ ಅಧ್ಯಕ್ಷ ಮುಸ್ತಾಫ,ರಹಿಂ, ಲಿಂಗೇರಿ ಚಂದ್ರ, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ಶಿವದಾಸ್ ಉಪಸ್ಥಿತರಿದ್ದರು.
ಇತರೆ ಪಕ್ಷಗಳಿಂದ ಜೆಡಿಎಸ್ ಸೇರಿದ ಕಾರ್ಯಕರ್ತರಿಗೆ ಪಕ್ಷದ ಬಾವುಟ ಹಿಡಿಸಿ ಜೆಡಿಎಸ್‍ಗೆ ಬರಮಾಡಿಕೊಳ್ಳಲಾಯಿತು