×
Ad

ಮಂಡ್ಯ: ಭೂಮಿಗೆ ಸೂಕ್ತ ಬೆಲೆ ನೀಡಲು ಆಗ್ರಹಿಸಿ ಪ್ರತಿಭಟನೆ

Update: 2017-12-30 22:05 IST

ಮಂಡ್ಯ, ಡಿ.30:  ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ದರ ನಿಗದಿಪಡಿಸುವ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲವೆಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಾಲೂಕಿನ ತೂಬಿನಕೆರೆ, ಎಲೆಚಾಕನಹಳ್ಳಿ ಗ್ರಾಮಸ್ಥರು ಪ್ರತಿಭಟಿಸಿದರು.

ಶನಿವಾರ ತೂಬಿನಕೆರೆಯಲ್ಲಿ ಪ್ರತಿಭಟನೆ ನಡೆಸಿದ ಅವರು, ಶಾಸಕ ಅಂಬರೀಶ್ ಸಚಿವರಾಗಿದ್ದ ಸಂದರ್ಭದಲ್ಲಿ ಪ್ರತಿ ಎಕರೆಗೆ 52ಲಕ್ಷ ರೂ. ನೀಡುವುದಾಗಿ ಹೇಳಿದ್ದರು. ಆದರೆ, ಈಗ ಮಂಡಳಿ ಒಂದು ಎಕರೆಗೆ 11 ಲಕ್ಷ ರೂ.ಗಳನ್ನು ನಿಗದಿಪಡಿಸಿದೆ ಎಂದು ಕಿಡಿಕಾರಿದರು. 

ಅಂಬರೀಶ್ ಅವರು ಎಕರೆಗೆ 52 ಲಕ್ಷ ರೂ. ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದರು. ಈಗ ಸರಕಾರ ಆದೇಶದಲ್ಲಿ ಎಕರೆ ಭೂಮಿಗೆ ಕೇವಲ 1.73 ಲಕ್ಷ ರೂ. ನಿಗದಿಪಡಿಸಿ ಅನ್ಯಾಯ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ರೈಲ್ವೆ ಇಲಾಖೆ ಎಕರೆಗೆ 40 ಲಕ್ಷ ರೂ. ನೀಡಿದೆ. ಇತ್ತೀಚೆಗೆ ಮೈಸೂರು-ಬೆಂಗಳೂರು ಹೆದ್ದಾರಿಗೆ 1  ಗುಂಟೆಗೆ 27 ಲಕ್ಷ ರೂ.ಗಳನ್ನು ಪ್ರಕಟಿಸಿದೆ. ಗೃಹಮಂಡಳಿ ಮಾತ್ರ ಕಡಿಮೆ ದರ ನಿಗದಿಪಡಿಸಿರುವುದು ಏಕೆ ಎಂದು ಅವರು ಪ್ರಶ್ನಿಸಿದರು.

ಅನ್ಯಾಯದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ, ಬೇಕಿದ್ದರೆ ನ್ಯಾಯಾಲಯಕ್ಕೆ ಹೋಗಿ ಎಂದು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಭರವಸೆ ನೀಡಿದಂತೆ ಸೂಕ್ತ ದರ ನಿಗದಿಮಾಡದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪ್ರೊ.ಶಂಕರೇಗೌಡ, ಜಿಪಂ ಸದಸ್ಯ ತೂಬಿನಕೆರೆ ರಾಮಲಿಂಗಯ್ಯ,  ಗ್ರಾಪಂ ಮಾಜಿ ಅಧ್ಯಕ್ಷ ಜಯಶಂಕರ್, ಗಣೇಶಪ್ಪ, ಜಯಶಂಕರ್, ಬಸವರಾಜು, ಕೃಷ್ಣೇಗೌಡ, ಪ್ರಸನ್ನ, ರಾಮಚಂದ್ರು,  ರೆಡ್ಡಿ ಗೋಪಾಲ್, ವಿಷಕಂಠು, ಶಿವಣ್ಣ, ಕುಮಾರ್, ಚನ್ನೇಗೌಡ, ಸತೀಶ್, ಚಂದ್ರಶೇಖರ್ ಆರಾಧ್ಯ, ಚಿಕ್ಕಸಿದ್ದಯ್ಯ, ಶಿವರಾಮು, ಕೆಂಪೇಗೌಡ, ಜವರಯ್ಯ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News