×
Ad

ಕುವೆಂಪು ಮಾನವೀಯತೆ ಪ್ರತಿಪಾದಿಸಿದ ಸಂತ ಕವಿ: ಎಚ್.ಆರ್.ಅರವಿಂದ್

Update: 2017-12-30 22:09 IST

ಮಂಡ್ಯ, ಡಿ.30: ಕುವೆಂಪು ಮಾನವೀಯತೆಯನ್ನು ತಮ್ಮ ಕಾವ್ಯಶಕ್ತಿಯಲ್ಲಿ ತುಂಬಿ ವಿಶ್ವಮಾನವತೆಯನ್ನು ಸಾರಿದ ಶ್ರೇಷ್ಠ ಸಂತ ಕವಿ ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಎಚ್.ಆರ್.ಅರವಿಂದ್ ಹೇಳಿದರು.

ನಗರದ ಸರಕಾರಿ ಬಾಲಕರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ಹಾಗೂ ಅರುಣೋದಯ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಕವಿ ಎಂದರೆ ಅದು ಕುವೆಂಪು ಎಂಬುದನ್ನು ಸಾಬೀತುಪಡಿಸಿದ ಪದ್ಮವಿಭೂಷಣ, ಸೇರಿದಂತೆ ನೂರಾರು ಬಿರುದುಗಳನ್ನು ತಮ್ಮದಾಗಿಸಿಕೊಂಡ ಅಕ್ಷರಬ್ರಹ್ಮ ಕುವೆಂಪು ಅವರ ಆಶಯಗಳನ್ನು ಮೈಗೂಡಿಸಿಕೊಂಡು ಅನುಷ್ಠಾನಗೊಳಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಕಾಯಕಯೋಗಿ ಫೌಂಡೇಷನ್ ಅಧ್ಯಕ್ಷ ಎಂ.ಶಿವಕುಮಾರ್ ಮಾತನಾಡಿ, ತಮ್ಮ ಬರಹದ ತುಂಬ ಪ್ರೀತಿ, ಬಾಂಧವ್ಯ, ಕನಸು, ಜಾಗೃತಿಯಂತಹ ಬರಹವನ್ನೇ ಜನಮಾನಸದಲ್ಲಿ ಬಿತ್ತಿ ತಾವೂ ಸಹ ಬರೆದಂತೆಯೇ ಬದುಕಿ ಆದರ್ಶವಾದವರು ಕುವೆಂಪು. ಅವರ ಶ್ರೇಷ್ಠ ಸಾಹಿತ್ಯ ಇಂದಿನ ಪೀಳಿಗೆಗೆ ಮಾರ್ಗದರ್ಶನವಾಗಬೇಕಿದೆ ಎಂದರು. 

ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ   ಕನಕರತ್ನ, ಜಯಕುಮಾರ್, ಬಸವರಾಜ್, ನಾಗರಾಜು ಹಾವೇರಿ, ಹನುಮಂತಪ್ಪ ಈರಪ್ಪ ಕರಾವಳಿ ಅವರಿಗೆ ಕುವೆಂಪುಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಚಾಮುಂಡಿ ಬಸವವಾಣಿ ಹಾಗೂ ರಾಷ್ಟ್ರೀಯ ಬಸವದಳದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.

ರಾಷ್ಟ್ರೀಯ ಬಸವದಳದ ಅಧ್ಯಕ್ಷ ಎಂ.ಗುರುಪ್ರಸಾದ್, ಕಸ್ತೂರಿ ಸಿರಿಗನ್ನಡವೇದಿಕೆ ಅಧ್ಯಕ್ಷ ಪೋತೇರಮಹದೇವು, ನಗರಸಭೆ ಮಾಜಿ ಸದಸ್ಯೆ ಪದ್ಮಾಮೋಹನ್, ನಿಲಯ ಪಾಲಕ ಸೋಮು, ಅರುಣೋದಯ ಟ್ರಸ್ಟ್ ಅಧ್ಯಕ್ಷೆ ಅರುಣಜ್ಯೋತಿ, ಬಸವಲಿಂಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News