ರೈತರ ರಕ್ಷಣೆಗೆ ಧಾವಿಸದಿದ್ದರೆ ಆಹಾರ ಸಮಸ್ಯೆ ಕಟ್ಟಿಟ್ಟ ಬುತ್ತಿ: ಪುಟ್ಟಮಾದಯ್ಯ ಆತಂಕ

Update: 2017-12-30 16:42 GMT

ಮದ್ದೂರು, ಡಿ.30: ಆಳುವ ಸರಕಾರಗಳು ರೈತರ ರಕ್ಷಣೆಗೆ ದಾವಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ರಾಜ್ಯ ಕೃಷಿ ಮಾರಾಟ ಮಂಡಳಿ ನಿವೃತ್ತ ಪ್ರಧಾನ ವ್ಯವಸ್ಥಾಪಕ ಪುಟ್ಟಮಾದಯ್ಯ ಅತಂಕ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಎಪಿಎಂಸಿ ಎಳನೀರು  ಮಾರುಕಟ್ಟೆ ಪ್ರಾಂಗಣದಲ್ಲಿ ಶನಿವಾರ ನಡೆದ ಮಾರುಕಟ್ಟೆ ಸಪ್ತಾಹದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬರುವ ಯಾವುದೇ ಸರಕಾರಗಳು ಗದ್ದುಗೆಯೇರಿದ ನಂತರ, ರೈತರ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದು ಸಾಮಾನ್ಯವಾಗಿದೆ ಎಂದು ವಿಷಾದಿಸಿದರು.

ಸರಕಾರಗಳ ರೈತವಿರೋಧಿ ಧೋರಣೆಯಿಂದ ಬೇಸತ್ತಿರುವ ರೈತರು ಕೃಷಿಯಿಂದ ವಿಮುಖರಾಗುವ ಕಾಲ ದೂರವಿಲ್ಲ. ಸರಕಾರಗಳು ರೈತರನ್ನು ಇಂತಹ ವಿಪತ್ತಿನಿಂದ ಪಾರುಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ತಲೆದೋರಿ ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಬರಬಹುದು ಎಂದು ಅವರು ಎಚ್ಚರಿಸಿದರು.
ನೈಸರ್ಗಿಕ ವಿಕೋಪಕಗಳ ನಡುವೆ ಸಹ ಕೃಷಿಕರು ಕಷ್ಟಪಟ್ಟು ದುಡಿದು ಬೆಳೆಗಳನ್ನು ಬೆಳೆಯುತ್ತಾರೆ. ಈ ರೀತಿ ಶ್ರಮವಹಿಸಿ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ದೊರಕಿದಾಗ ಮಾತ್ರ ದೇಶದ ಮತ್ತು ರೈತರ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕೃಷಿಕರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಬೇಕಾದರೆ ಮಾರುಕಟ್ಟೆ ಪ್ರಾಂಗಣದಲ್ಲಿ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಹಾಗು ಉತ್ಪನ್ನಗಳ ವರ್ಗೀಕರಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಸಲಹೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಎಪಿಎಂಸಿ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಸರಕಾರ ರೈತರ ಅಭಿವೃದ್ಧಿಗಾಗಿ ಕೃಷಿ ಮಾರಾಟ ಮಂಡಳ ರೂಪಿಸಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು.  ರೈತರು ಬೆಳೆಗಾರರ ಸಂಘ ರಚಿಸಿಕೊಂಡು ತಮ್ಮ ಉತ್ಪನ್ನಗಳನ್ನು ಆಮದು ಮಾರುಕಟ್ಟೆಗೆ ತಲುಪಿಸುವ ವ್ಯವಸ್ಥೆಗೆ ಆದ್ಯತೆ ನೀಡಿದರೆ ಉತ್ಪನ್ನಗಳಿಗೆ ಸ್ಪರ್ಧಾತ್ಮಕ ಬೆಲೆಯೊಂದಿಗೆ  ಶೀಘ್ರ ಹಣ ಪಾವತಿ ಸಾಧ್ಯವಾಗುತ್ತದೆ ಎಂದರು.

ಉಪಾಧ್ಯಕ್ಷೆ ಮಮತ ಶ್ರೀಕಂಠೇಗೌಡ ಅಧ್ಯಕ್ಷತೆವಹಿಸಿದ್ದರು. ಸದಸ್ಯರಾದ ಎ.ಎಸ್.ರಾಮಕೃಷ್ಣ, ಎಸ್.ಎನ್.ಕೃಷ್ಣ, ಎಂ.ಇ.ಮಹೇಂದ್ರ, ಸಿ.ರಾಜು, ಕರಿಯಪ್ಪ, ಪಾರ್ವತಮ್ಮ, ನರಸಿಂಹರಾಜು, ಸುಂದರ್, ಕೆ.ರಾಜು, ಸಂದೀಪ್, ಎಂ.ಡಿ.ಪ್ರಕಾಶ್, ಕವಿತಾ, ಕಾರ್ಯದರ್ಶಿ ಬಿ.ಶ್ರೀಕಂಠ ಪ್ರಭು, ಸಹಾಯಕ ಕಾರ್ಯದರ್ಶಿ ಎನ್.ನಾಗೇಶ್, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News