ಸಾರ್ವಜನಿಕರಿಗೆ ಸೌಲಭ್ಯ ತಲುಪಿಸಿ: ಡಿಸಿ ಜೋತ್ಸ್ನಾ
► ಕೆಲಸದ ಒತ್ತಡ ಕಡಿಮೆ ಮಾಡಲು ಕ್ರೀಡೆ ಅಗತ್ಯ
► ದಿನಚರಿ ಬರೆಯುವುದು ಒಳ್ಳೆಯ ಹವ್ಯಾಸ
► ಮಾನಸಿಕ, ದೈಹಿಕ ಆರೋಗ್ಯದಿಂದ ಉತ್ತಮ ಸೇವೆ
ಚಳ್ಳಕರೆ, ಡಿ.31: ಬೆಳೆ ಸಮೀಕ್ಷೆ, ಒಟಿಸಿ, ಪಹಣಿ ತಿದ್ದುಪಡಿ, ಬೆಳೆ ದೃಢೀಕರಣ, ಪಿಂಚಣಿ, ಜನನ ಮರಣ ಪತ್ರ ಸೇರಿದಂತೆ ಹಲವು ಯೋಜನೆಗಳನ್ನು ಸಕಾಲಕ್ಕೆ ಸಾರ್ವಜನಿಕರಿಗೆ ತಲುಪಿಸುವ ನಿಟ್ಟಿನಿಲ್ಲಿ ಉತ್ತಮ ಸೇವೆ ಮಾಡುವಂತೆ ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾರೆಡ್ಡಿ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.
ನಗರದ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಹಾಗೂ ಗ್ರಾಮಲೆಕ್ಕಾಧಿಕಾರಿ ಸಂಘದ ವತಿಯಿಂದ ಶನಿವಾರ ಆಯೋಜಿಸಿದ್ದ ನೂತನ ವರ್ಷದ ಕ್ಯಾಲೆಂಡರ್ ಹಾಗೂ ದಿನಚರಿ ಬಿಡುಗಡೆಗೊಳಿಸಿ ಮಾತನಾಡಿದರು.
ಕಂದಾಯ ಇಲಾಖೆ ನೌಕರರು ಒತ್ತಡದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಒತ್ತಡವನ್ನು ಕಡಿಮೆ ಮಾಡಲು ಇಂತಹ ಕ್ರೀಡಾಕೂಟಗಳು ಅತ್ಯವಶ್ಯಕ ಎಂದು ಹೇಳಿದರು.
ಕಂದಾಯ ಇಲಾಖೆ ನೌಕರರು ಕ್ರೀಡಾಕೂಟದ ಜತೆಗೆ ದಿನಚರಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಮಹತ್ವಪೂರ್ಣ. ಪ್ರತಿನಿತ್ಯ ದಿನಚರಿಯಲ್ಲಿ ಒಳ್ಳೆಯ ಹಾಗೂ ಕೆಟ್ಟ ಎರಡು ಮಾಹಿತಿಗಳನ್ನು ಪ್ರತಿಯೊಂದು ಪುಟಗಳಲ್ಲಿ ಉತ್ತಮ ಮಾಹಿತಿಯನ್ನು ಬರೆಯುವ ಮೂಲಕ ಜನರಿಗೆ ಸೌಲಭ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವಂತೆ ತಾಕೀತು ಮಾಡಿದರು.
ಜಿಪಂ ಸಿಇಒ ಪಿ.ರವೀಂದ್ರ ಮಾತನಾಡಿ, ನೌಕರರು ವರ್ಷಕ್ಕೊಮ್ಮೆ ಕ್ರೀಡೆಯಲ್ಲಿ ಭಾಗವಹಿಸುವ ಬದಲು ಬಿಡುವಿನ ಸಮಯ ಹಾಗೂ ತಿಂಗಳಿಗೊಮ್ಮೆಯಾದರೂ ಕ್ರೀಡಾಕೂಟದಲ್ಲಿ ಭಾಗವಹಿಸಿದಾಗ ದೇಹಕ್ಕೆ ಆಲಸ್ಯ, ಒತ್ತಡ ಕಡಿಮೆಯಾಗುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಇಂತಹ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ವೈಯಕ್ತಿಕ ಸಮಸ್ಯೆಗಳನ್ನು ಮನೆಯಲ್ಲಿ ಬಿಟ್ಟು ಕಚೇರಿಗೆ ಬಂದರೆ ಮಾತ್ರ ಮಾನಸಿಕ, ದೈಹಿಕ ಆರೋಗ್ಯವಾಗಿದ್ದರೆ ಮಾತ್ರ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಶ್ರೀನಾಥ್ ಎಂ.ಜೋಶಿ, ಉಪವಿಭಾಗಾಧಿಕಾರಿ ವಿಜಯಕುಮಾರ್, ತಹಶೀಲ್ದಾರ್ ಟಿ.ಸಿ. ಕಾಂತರಾಜ್, ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಅಂದಾನಗೌಡ ತಾಲೂಕು ಗ್ರಾಮ ಲೆಕ್ಕಾಧಿಕಾರಿ ಸಂಘದ ಅಧ್ಯಕ್ಷ ಲಿಂಗೇಗೌಡ ಮತ್ತಿತರರು ಮಾತನಾಡಿದರು.
ತಾಪಂ ಇಒ ಈಶ್ವರಪ್ರಸಾದ್, ಚಿತ್ರದುರ್ಗ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಹಿರಿಯೂರು ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ, ಹೊಸದುರ್ಗ ತಹಶೀಲ್ದಾರ್ ಕವಿರಾಜ್, ಹೊಳಲ್ಕೆರೆ ತಿಪ್ಪೇಸ್ವಾಮಿ.ವೈ ಗ್ರೇಡ್-2 ತಹಶೀಲ್ದಾರ್ ಕೆ.ಆರ್. ನಾಗರಾಜು, ಜಿ.ಆರ್. ಶರಣಬಸವೇಶ್ವರ, ಬಿ.ಎಸ್. ಸಿದ್ದೆಶ್, ಎಂ.ಜಿ. ಪ್ರಕಾಶ್, ಪ್ರಾಣೇಶ್ ಇತರರಿದ್ದರು.
ಕಾರ್ಯಕ್ರಮಲ್ಲಿ ಮಹಿಳೆ ಹಾಗೂ ಪುರುಷರಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿದರು.