ಸರಕಾರಿ ಅಭಿಯೋಜಕಿ ತನುಜಾ ಹೊಸ್ಪಟ್ಟಣ ಅಮಾನತು
ಶಿರಸಿ, ಡಿ.31: ರಾಜ್ಯ ಗೃಹ ಇಲಾಖೆಯು ಸರಕಾರಿ ಅಭಿಯೋಜಕಿ ತನುಜಾ ಹೊಸ್ಪಟ್ಟಣ ಅವರನ್ನು ಶಿರಸಿ ಗಲಭೆಗೆ ಸಂಬಂಧಿಸಿದಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಶಿರಸಿ ಗಲಭೆ ಸಂದಭರ್ದಲ್ಲಿ ತನುಜಾ ಹೊಸ್ಪಟ್ಟಣ ರಜೆಯ ಮೇಲಿದ್ದು ತಮ್ಮ ಹುದ್ದೆಯ ಪ್ರಭಾರವನ್ನು ಬೇರೆಯವರಿಗೆ ವಹಿಸದೇ ಇರುವ ಕಾರಣಕ್ಕಾಗಿ ರಾಜ್ಯ ಗೃಹ ಇಲಾಖೆಯು ಅಭಿಯೋಜಕಿ ತನುಜಾ ಅವರನ್ನು ಅಮಾನತು ಮಾಡಿದೆ ಎಂದು ತಿಳಿದುಬಂದಿದೆ.
ಡಿ.12ರಂದು ಶಿರಸಿ ಬಂದ್ ಸಂದರ್ಭ ದಲ್ಲಿ ಗಲಭೆ ಮತ್ತು ಕಲ್ಲು ತೂರಾಟ ನಡೆದಿತ್ತು ಹಾಗೂ ಲಕ್ಷಾಂತರ ರೂ. ವೌಲ್ಯದ ಸ್ವತ್ತು ದಾಳಿಗೆ ತುತ್ತಾಗಿತ್ತು. ಇದಕ್ಕೆ ಸಂಬಂಧಪಟ್ಟಂತೆ 62 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಕೊಲೆ ಯತ್ನ ಕಲಂ(307)ನ್ನು ಬಂಧಿತರ ವಿರುದ್ಧ ದಾಖಲಿಸಿ ಧಾರವಾಡ ಜೈಲಿಗೆ ಕಳುಹಿಸಲಾಗಿತ್ತು.
ಸರಕಾರಿ ಅಭಿಯೋಜಕರ ಪರ ಸೂಕ್ತವಾದ ಮಂಡಿಸದೇ ಇರುವುದರಿಂದ ಆರೋಪಿತರಿಗೆ ಎರಡನೇ ದಿನ ದಲ್ಲಿ ಜಾಮೀನು ಲಭಿಸಲು ಕಾರಣವೆಂದು ಗೃಹ ಇಲಾಖೆ ಪರಿಗಣಿಸಿದೆ.
ವಾರದ ಮೂರು ದಿನಗಳು ಕಾರವಾರ ಮತ್ತು ಮೂರು ದಿನಗಳು ಶಿರಸಿ ನ್ಯಾಯಾಲಯದಲ್ಲಿ ಸರಕಾರಿ ಅಭಿಯೋಜಕಿ ಆಗಿ ತನುಜಾ ಹೊಸ್ಪಟ್ಟಣ ಅವರು ಕಾರ್ಯ ನಿರ್ವಹಿಸುತ್ತಿದ್ದರು.