ಹಕ್ಕು ಪತ್ರ ನೀಡುತ್ತಿರುವುದು ಪವಿತ್ರ ಕೆಲಸ: ಸಚಿವ ಕಾಗೋಡು ತಿಮ್ಮಪ್ಪ
ಶಿವಮೊಗ್ಗ, ಡಿ.31: ಭೂಮಿಗಾಗಿ ಹೋರಾಟ ಮಾಡುತ್ತಿರುವವರಿಗೆ ಹಕ್ಕು ಪತ್ರ ನೀಡುತ್ತಿರುವುದು ಪುಣ್ಯ ಕ್ಷೇತ್ರಗಳಿಗೆ ಭೆೇಟಿ ನೀಡಿ ಪೂಜೆ ಸಲ್ಲಿಸಿದಷ್ಟು ಸಂತೃಪ್ತಿ ತಂದಿದೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಿಸಿ್ದಾರೆ.
ಜಿಲ್ಲೆಯ ಹಾರೇಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ಅವರು, ಸಾಮಾಜಿಕ, ಆರ್ಥಿಕವಾಗಿ ಸಧೃಡರಾಗಲು ಪ್ರತಿಯೊಬ್ಬರಿಗೂ ನಿವೇಶನ ಅಗತ್ಯವಿರುತ್ತದೆ. ಸುಮಾರು 60 ವರ್ಷಗಳಿಂದ ವಾಸಿಸುತ್ತಿರುವ ಭೂಮಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೀವನದಲ್ಲಿ ತಾವು ಹುಟ್ಟಿ ಬೆಳೆದಂತಹ ಜಾಗಕ್ಕೆ ಹಕ್ಕನ್ನು ಪಡೆದಿರುವ ಕೆಲಸವು ಕೊನೆಯವರೆಗೆ ನೆನಪಿನಲ್ಲಿರಬೇಕು ಎಂದರು.
ಹಕ್ಕುಪತ್ರ ವಿತರಿಸಿ ಕಾನೂನು ಬದ್ಧವಾಗಿ ಹಕ್ಕನ್ನು ನೀಡುತ್ತಿರುವುದು ಪವಿತ್ರವಾದ ಕೆಲಸ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಸುಮಾರು 175 ಜನರಿಗೆ ಹಕ್ಕು ಪತ್ರ ನೀಡುತ್ತಿರುವುದಾಗಿ ಅವರು ತಿಳಿಸಿದರು.ಭೂಮಿಗಾಗಿ ಹೋರಾಟ ಮಾಡುತ್ತಿರುವವರ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿಯೇ ರಾಜಕೀಯಕ್ಕೆ ನಾನು ಬಂದಿದ್ದು. ಇಂದು ಅಂತ ಸಮಸ್ಯೆಗಳಿಗೆ ಸ್ವಲ್ಪಮಟ್ಟಿನ ಪರಿಹಾರ ನೀಡುತ್ತಿದ್ದೇನೆ ಎಂಬ ತೃಪ್ತಿಯಿದೆ. 2015 ರಿಂದ ಮನೆ ಕಟ್ಟಿಕೊಂಡವರಿಗೂ ಸಹ ಹಕ್ಕು ಪತ್ರ ನೀಡಲಾಗುತ್ತಿರುವುದರಿಂದ ಇನ್ನೂ 200 ಹಕ್ಕುಪತ್ರಗಳನ್ನು ನೀಡುವ ಅವಶ್ಯಕತೆಯಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧಕ್ಷ್ಷೆ ವೇದಾವಿಜಯ್ ಕುಮಾರ್, ಹಾಪ್ ಕಾಮ್ಸ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ್ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು. ಬಡವರಿಗೆ ಭೂಮಿ ಕೊಟ್ಟು ಅವರ ಬದುಕಿಗೆ ಬೆಳಕು ನೀಡಬೇಕು ಎಂಬ ಆಶಯದಿಂದ ಇಂದು ಹಕ್ಕಪತ್ರ ನೀಡಲಾಗಿದೆ. ಸುಮಾರು ವರ್ಷಗಳಿಂದ ತಾವಿರುವ ಜಾಗಕ್ಕೆ ಸೂಕ್ತ ದಾಖಲೆಗಳಿಲ್ಲದೆ ವಾಸಿಸುತ್ತಿರುವವರಿಗೆ ಹಕ್ಕು ಪತ್ರ ನೀಡಿ ಅವರ ನಿವೇಶನದ ಹಕ್ಕನ್ನು ಅವರಿಗೆ ಸಂಪೂರ್ಣವಾಗಿ ನೀಡಲಾಗಿದೆ.
ಆರ್.ಪ್ರಸನ್ನಕುಮಾರ್, ವಿಧಾನ ಪರಿಷತ್ ಸದಸ್ಯ