ಅಬ್ಬಬ್ಬಾ... ಖಾತೆಯಲ್ಲಿ ಕನಿಷ್ಠ ಮೊತ್ತ ಇಡದವರಿಂದ ಎಸ್ ಬಿಐ ವಸೂಲಿ ಮಾಡಿದ ಮೊತ್ತ ಕೇಳಿದರೆ ನೀವು ಹೌಹಾರುವುದು ಖಚಿತ

Update: 2018-01-02 07:48 GMT

ಹೊಸದಿಲ್ಲಿ, ಜ.2: ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡದ ಗ್ರಾಹಕರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಪ್ರಿಲ್-ನವೆಂಬರ್ 2017ರ ಅವಧಿಯಲ್ಲಿ 1,771 ಕೋಟಿ ರೂ.ಗಳನ್ನು ವಸೂಲಿ ಮಾಡಿದೆ.

ತಮ್ಮ ಖಾತೆಯಲ್ಲಿ ಮಾಸಿಕ ಕನಿಷ್ಠ ಸರಾಸರಿ ಮೊತ್ತವನ್ನು ಇಡದ ಗ್ರಾಹಕರಿಂದ ಈ ಮೊತ್ತವನ್ನು ವಸೂಲಿ ಮಾಡಲಾಗಿದೆ ಎಂದು ವರದಿಯಾಗಿದ್ದು, ಈ ಮೊತ್ತವು ಬ್ಯಾಂಕಿನ ಜುಲೈ-ಸೆಪ್ಟಂಬರ್ ತ್ರೈಮಾಸಿಕ ಅವಧಿಯಲ್ಲಿ ಗಳಿಸಿದ ಲಾಭಕ್ಕಿಂತ ಅಧಿಕ ಎನ್ನಲಾಗಿದೆ. ಈ ಅವಧಿಯಲ್ಲಿ ಎಸ್ ಬಿಐ 1,581.55 ಕೋಟಿ ರೂ. ಲಾಭ ಗಳಿಸಿತ್ತು.

2016-17ನೆ ಹಣಕಾಸು ವರ್ಷದಲ್ಲಿ ಎಸ್ ಬಿಐ ಕನಿಷ್ಠ ಮೊತ್ತ ಇಲ್ಲದ ಖಾತೆಗಳಿಂದ ಹಣ ವಸೂಲಿ ಮಾಡಿರಲಿಲ್ಲ. 5 ವರ್ಷಗಳ ನಂತರ ಈ ದಂಡವನ್ನು ಮತ್ತೊಮ್ಮೆ ಜಾರಿಗೆ ತರಲಾಗಿತ್ತು. ಎಸ್ ಬಿಐನಲ್ಲಿ 42 ಕೋಟಿ ಉಳಿತಾಯ ಖಾತೆಗಳಿದ್ದು, ಅವುಗಳಲ್ಲಿ 13 ಕೋಟಿ ಸಾಮಾನ್ಯ ಉಳಿತಾಯ ಬ್ಯಾಂಕ್ ಡೆಪಾಸಿಟ್ಸ್ ಖಾತೆಗಳು ಹಾಗು ಪ್ರಧಾನ ಮಂತ್ರಿ ಜನ ಧನ್ ಯೋಜನೆಯ ಖಾತೆಗಳಾಗಿವೆ. ಈ ಎರಡೂ ಖಾತೆಗಳಿಗೆ ದಂಡದಿಂದ ವಿನಾಯಿತಿ ನೀಡಲಾಗಿದೆ.

ಸ್ಟೇಟ್ ಬ್ಯಾಂಕ್ ಸೋಮವಾರ ಮೂಲ ದರದಲ್ಲಿ ಇಳಿಕೆ ಮಾಡಿ ಸಾಲಗಾರರಿಗೆ ಹೊಸವರ್ಷದ ಉಡುಗೊರೆ ನೀಡಿತ್ತು. ಮೂಲ ಸಾಲ ದರ ಮಾನದಂಡವನ್ನು ಮೂವತ್ತು ಅಂಕಗಳಷ್ಟು ಕಡಿಮೆ ಮಾಡಿತ್ತು. ಎಸ್‌ಬಿಐ ಮೂಲದರವನ್ನು ಸದ್ಯ ಇರುವ ಗ್ರಾಹಕರಿಗೆ ಹಳೆಯ 8.95%ನಿಂದ 8.65%ಕ್ಕೆ ಹಾಗು ಮೂಲ ಸಾಲ ದರವನ್ನು 13.70%ನಿಂದ 13.40%ಗೆ ಇಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News