ಪ್ರವಾಸಿ ಮಂದಿರದ ಆವರಣದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ವಿರೋಧ
ಮೂಡಿಗೆರೆ, ಜ. 2: ರಾಜ್ಯ ಸರಕಾರದ ಇಂದಿರಾ ಕ್ಯಾಂಟೀನ್ ತೆರೆಯಲು ಪಟ್ಟಣದ ಪ್ರವಾಸಿ ಮಂದಿರದ ಬಳಿ ಜಾಗ ಗುರುತಿಸಿದ್ದು, ಜ.5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿಲಿದ್ದು, ಅಂದು ಅವರು ಶಂಕುಸ್ಥಾಪನೆ ನಡೆಸಲು ಮುಂದಾದರೆ ಕಪ್ಪು ಭಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸುವುದಾಗಿ ಪ.ಪಂ. ಉಪಾಧ್ಯಕ್ಷೆ ನಯನ ಲೋಕಪ್ಪಗೌಡ ತಿಳಿಸಿದರು.
ಅವರು ಮಂಗಳವಾರ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದಿರಾ ಕ್ಯಾಂಟೀನ್ ತೆರೆಯಲು ತಮ್ಮ ವಿರೋಧವಿಲ್ಲ. ಡಿ.28ರಂದು ಜಿಲ್ಲಾಧಿಕರಿ ಶೀರಂಗಯ್ಯ ಅವರು ಇಂದಿರಾ ಕ್ಯಾಟೀನ್‍ಗಾಗಿ ಮೂರು ಕಡೆ ಜಾಗ ಪರಿಶೀಲನೆ ನಡೆಸಿದ್ದು, ಪ್ರವಾಸಿ ಮಂದಿರದ ಆವರಣ ಕ್ಯಾಂಟೀನ್‍ಗೆ ಜಾಗ ಸೂಕ್ತವಾಗಿಲ್ಲ. ಸೆಂಟ್ ಮಾರ್ಥಾಸ್ ಬಳಿ ಇರುವ ಗ್ರಾಮಠಾಣ ಜಾಗ ಸೂಕ್ತವಾಗಿದೆ.
ಅಲ್ಲಿಯೆ ಇಂದಿರಾ ಕ್ಯಾಂಟೀನ್‍ಗೆ ಜಾಗ ನೀಡೋಣ ಎಂದಿದ್ದರು. ಆದರೆ ಪ.ಪಂ. ಹಿರಿಯ ಸದಸ್ಯರೊಬ್ಬರು ಪ್ರವಾಸಿ ಮಂದಿರದ ಆವರಣದಲ್ಲಿ ಜಾಗ ನೀಡಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಸರಕಾರದ ಮಟ್ಟದಲ್ಲೂ ತಮ್ಮ ಪ್ರಭಾವ ಬಳಸಿ ಪ್ರವಾಸಿ ಮಂದಿರದ ಆವರಣದಲ್ಲಿಯೆ ಇಂದಿರಾ ಕ್ಯಾಂಟೀನ್ ತೆರೆಯಲು ಮುಂದಾಗುವಂತೆ ಒತ್ತಡ ಹಾಕುತ್ತಿದ್ದಾರೆ. ಇದು ಖಂಡನೀಯ ಎಂದು ಹೇಳಿದರು.
ಸದಸ್ಯ ಜೆ.ಬಿ.ಧರ್ಮಪಾಲ್ ಮಾತನಾಡಿ, ಪ್ರವಾಸಿ ಮಂದಿರದ ಕಾಂಪೌಂಡ್ ಬಳಿ ಕಳೆದ 20 ವರ್ಷದಿಂದ ಮಹಮ್ಮದ್ ಎಂಬ ವಿಕಲಚೇತನ ವ್ಯಕ್ತಿಯೊಬ್ಬರು ಚಿಕ್ಕ ಕ್ಯಾಂಟೀನ್‍ವೊಂದನ್ನು ನಡೆಸುತ್ತಿದ್ದಾರೆ. ಪಕ್ಕದಲ್ಲಿಯೇ ಚಮ್ಮಾರ ಕುಟೀರವೊಂದಿದೆ. ಇದನ್ನು 15 ದಿನದಲ್ಲಿ ತೆರವುಗೊಳಿಸುವಂತೆ ಪಪಂ ಹಿರಿಯ ಸದಸ್ಯರೊಬ್ಬರು ಸೂಚಿಸಿದ್ದಾರೆ. ಇದು ಸರಿಯಲ್ಲ. ಪ್ರವಾಸಿ ಮಂದಿರದ ಕಾಂಪೌಂಡ್ ಹೊಡೆದು ಕ್ಯಾಂಟೀನ್ ನಿರ್ಮಿಸಿದರೆ ಸ್ವಚ್ಚತೆಗೆ ತೊಂದರೆಯಾಗಲಿದೆ. ಚರಂಡಿ ನಿರ್ಮಿಸಲು ವ್ಯವಸ್ಥೆಯಿಲ್ಲ. ಕ್ಯಾಂಟೀನ್ ತ್ಯಾಜ್ಯ ಹೊರ ಹೋಗಲು ತೊಂದರೆಯಾಗಲಿದೆ. ಹಾಗಾಗಿ ಸೆಂಟ್ ಮಾರ್ಥಸ್ ಶಾಲೆ ಬಳಿ ಇರುವ ಗ್ರಾಮಠಾಣ ಜಾಗದಲ್ಲಿ ತೆರೆಯಬೇಕು ಎಂದು ಒತ್ತಾಯಿಸಿದರು.
ಪಪಂ ಸದಸ್ಯರಾದ ಲತಾ, ಪೂರ್ಣಿಮಾ ಮಲ್ಯ, ಬಿಜೆಪಿ ಮುಖಂಡರಾದ ಪಟೇಲ್ ಮಂಜು, ಲೋಕಪ್ಪಗೌಡ, ಎಂ.ಎಸ್.ಕೃಷ್ಣ, ಮಹೇಶ್, ಹುಲ್ಲೆಮನೆ ಚಂದ್ರು, ನಾರಾಯಣ ಉಪಸ್ಥಿತರಿದ್ದರು.