ಶಿವಮೊಗ್ಗ ,ಭದ್ರಾವತಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಅಡಕೆ ಕಳ್ಳತನ
Update: 2018-01-02 19:41 IST
ಶಿವಮೊಗ್ಗ, ಜ. 2: ಜಿಲ್ಲೆಯ ಶಿವಮೊಗ್ಗ ಹಾಗೂ ಭದ್ರಾವತಿ ತಾಲೂಕಿನಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ಅಡಕೆ ಅಪಹರಿಸಿ ಕಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ.
ಶಿವಮೊಗ್ಗ ವರದಿ: ನಗರದ ಹೊರವಲಯ ಪುರಲೆ ಗ್ರಾಮದ ಶಶಿಕಲಾ ಎಂಬುವರ ಮನೆಯ ಬಳಿಯಿರುವ ಅಡಕೆ ಸುಲಿಯುವ ಶೆಡ್‍ನಲ್ಲಿರಿಸಲಾಗಿದ್ದ 43 ಸಾವಿರ ರೂ. ಮೌಲ್ಯದ ಅಡಕೆಯನ್ನು ಕಳ್ಳರು ಅಪಹರಿಸಿ ಪರಾರಿಯಾಗಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರಾವತಿ ವರದಿ: ತಾಲೂಕಿನ ದಿಗ್ಗೇನಹಳ್ಳಿ ಗ್ರಾಮದ ಅಡಕೆ ತೋಟವೊಂದರಲ್ಲಿದ್ದ 13 ಚೀಲ ಅಡಕೆಯನ್ನು ಕಳ್ಳರು ಅಪಹರಿಸಿದ್ದಾರೆ. ವಿರೂಪಾಕ್ಷಪ್ಪ ಎಂಬುವರಿಗೆ ಈ ಅಡಕೆ ಚೀಲಗಳು ಸೇರಿದ್ದಾಗಿದೆ. ಕಳುವಾದ ಅಡಕೆಯ ಮೌಲ್ಯ 2.14 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ