ಮೈಸೂರು: ಮಹಾನಗರ ಪಾಲಿಕೆಯ ಮೀಸಲಾತಿ ಪ್ರಕಟಣೆ
ಮೈಸೂರು,ಜ.2: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಕ್ಕೆ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು, ಈ ಬಾರಿ ಎರಡು ಸ್ಥಾನಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಮೀಸಲಿಡುವ ಮೂಲಕ ಪಾಲಿಕೆಯ ಆಡಳಿತನ್ನು ಕಾಂಗ್ರೆಸ್ ವಶಪಡಿಸಿಕೊಳ್ಳಲಿದೆ.
ಮೈಸೂರು ಮಹಾನಗರ ಪಾಲಿಕೆಯ ಕೊನೆಯ ಅವಧಿಗೆ ಮೀಸಲಾತಿಯನ್ನ ರಾಜ್ಯ ಸರ್ಕಾರ ಪ್ರಕಟಿಸಿದ್ದು, ಮೇಯರ್ ಸ್ಥಾನವನ್ನ ಎಸ್ಸಿ ಮಹಿಳೆಗೆ ಮತ್ತು ಉಪಮೇಯರ್ ಸ್ಥಾನವನ್ನ ಎಸ್ಟಿ ಮಹಿಳೆಗೆ ಮೀಸಲಿಡಲಾಗಿದೆ. ಈ ಸಂಬಂಧ ಸರ್ಕಾರದ ಕಾರ್ಯದರ್ಶಿಗಳಾದ ಬಾಗಲವಾಡೆ ಅವರು ಜ.1ರಂದು ಮೀಸಲು ಪಟ್ಟಿ ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಮೈಸೂರು ಮಹಾನಗರ ಪಾಲಿಕೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಕಳೆದ ನಾಲ್ಕು ಅವಧಿಗಳಲ್ಲೂ ಜೆಡಿಎಸ್ ಅಧಿಕಾರ ನಡೆಸಿದ್ದು, ಬಿಜೆಪಿ ಉಪಮೇಯರ್ ಸ್ಥಾನಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈ ಬಾರಿ ಸಿಎಂ, ತಮ್ಮ ತವರು ಜಿಲ್ಲೆಯಲ್ಲಿ ಶತಯಾಗತಾಯ ಪಾಲಿಕೆಯಲ್ಲಿ ಅಧಿಕಾರ ನಡೆಸಲು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲು ಪ್ರಕಟಿಸಿದ್ದು, ಪರಿಶಿಷ್ಟ ಜಾತಿಯಿಂದ ಕಾಂಗ್ರೆಸ್‍ನಲ್ಲಿ ಮಾತ್ರ ಇಬ್ಬರು ಮಹಿಳಾ ಸದಸ್ಯರು ಆಯ್ಕೆಯಾಗಿದ್ದು, ಹೀಗಾಗಿ ಈ ಬಾರಿ ಬಹುತೇಕ ಕಾಂಗ್ರೆಸ್ ಪಕ್ಷವೇ ಪಾಲಿಕೆಯಲ್ಲಿ ಆಡಳಿತ ನಡೆಸುವುದು ಖಚಿತವಾಗಿದೆ.