ಕಡೂರು:ರಾಘವೇಂದ್ರ ಯೋಗ ಕೇಂದ್ರದಿಂದ ವಿಭಿನ್ನ ರೀತಿಯಲ್ಲಿ ಹೊಸ ವರ್ಷಾಚರಣೆ
ಕಡೂರು, ಜ.2: ಪಟ್ಟಣದ ಶ್ರೀ ರಾಘವೇಂದ್ರ ಯೋಗಾ ಕೇಂದ್ರದ ವತಿಯಿಂದ ನಿಜವಾದ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಮೂಲಕ ವಿಭಿನ್ನ ರೀತಿಯಲ್ಲಿ ಹೊಸ ವರ್ಷಾಚರಣೆಯನ್ನು ಲಯನ್ಸ್ ಭವನದಲ್ಲಿ ಆಚರಿಸಲಾಯಿತು.
ಅಂತರಾಷ್ಟ್ರೀಯ ಯೋಗಪಟು ಶಾಲಿನಿ, ಪುರಸಭೆ ರಸ್ತೆಗಳನ್ನು ಅಚ್ಚುಕಟ್ಟಾಗಿ ಕಸ ಗುಡಿಸುವ ಶಾಂತಮ್ಮ, ಭರತನಾಟ್ಯ ಕಲಾವಿದರಾದ ಕುಮಾರಿ ಚಂದನ, ಪವಿತ್ರ, ಅರ್ಚಕರಾದ ರೇವಣ್ಣ ಒಡೆಯರ್, ಪತ್ರಕರ್ತರ ಸಂಘದ ಅಧ್ಯಕ್ಷ ಎ.ಜೆ.ಪ್ರಕಾಶ್‍ಮೂರ್ತಿಯವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಯೋಗಕೇಂದ್ರದ ಅಧ್ಯಕ್ಷರಾದ ಹೆಚ್.ಎಲ್. ಶೇಖರಪ್ಪ ಮಾತನಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗವನ್ನು ಪ್ರತಿಯೊಬ್ಬರೂ ಕಲಿಯಕಬೇಕಿದೆ. ಯೋಗ ಎಂಬುದು ಊಟದಷ್ಟೇ ಮುಖ್ಯವಾದದ್ದು. ಈ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗೆದ್ದುಬಂದ ಯೋಗಪಟುಗಳಿದ್ದಾರೆ. ಹಾಗೂ ರಾಜ್ಯಮಟ್ಟದಲ್ಲಿ ಗೆದ್ದಂತಹ ಕುಸ್ತಿಪಟುಗಳು, ಕಬಡ್ಡಿ ಆಟಗಾರರು, ವಾಲಿಬಾಲ್ ಕ್ರೀಡಾಕೂಟ ಪಟುಗಳು ಇದ್ದಾರೆ. ಅವರುಗಳನ್ನು ಯಾರೂ ಸಹ ಗುರುತಿಸುವ ಕಾರ್ಯ ಮಾಡುತ್ತಿಲ್ಲ. ಸನ್ಮಾನಗಳು ಮಾರಾಟದ ವಸ್ತುಗಳಾಗಿವೆ. ಹಣ ಕೊಟ್ಟವರಿಗೆ ಮಾತ್ರ ಸನ್ಮಾನ ಎಂಬಂತಾಗಿರುವುದು ವಿಷಾದನೀಯ ಎಂದು ಹೇಳಿದರು.
ಲಯನ್ಸ್ ಸಂಸ್ಥೆಯ ಪ್ರಾಂತೀಯ ಅಧ್ಯಕ್ಷ ನರೇಂದ್ರನಾಥ್ ಮಾತನಾಡಿ ಹೊಸ ವರ್ಷದ ಹೆಸರಿನಲ್ಲಿ ಮೋಜು-ಮಸ್ತಿ ಮಾಡುವವರೇ ಹೆಚ್ಚಾಗಿರುತ್ತಾರೆ. ಹಣವನ್ನು ವಿನಾಕಾರಣ ಪೋಲು ಮಾಡುತ್ತಿದ್ದು, ಹೊಸ ವರ್ಷದ ಹೆಸರಿನಲ್ಲಿ ಇಂತಹ ನಿಜವಾದ ಸಾಧಕರನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವವರನ್ನು ಅತ್ಯಂತ ಬಡತನದ ರೇಖೆಯಲ್ಲಿದ್ದು, ಸಾಧಕರಾದವರಿಗೆ ಗುರುತಿಸುವ ಕಾರ್ಯವನ್ನು ಈ ಕೇಂದ್ರ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿಯೂ ಇದನ್ನು ಮುಂದುವರೆಸಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯೋಗಗುರುಗಳಾದ ಗಿರೀಶ್, ಶ್ರೀಮತಿ ವಿಜಯ, ಯೋಗಕೇಂದ್ರದ ಪುಟಾಣಿ ಮಕ್ಕಳು ಭಾಗವಹಿಸಿದ್ದರು.