×
Ad

ಚಾಮರಾಜನಗರ: ಭಾರತೀಯ ವೈದ್ಯಕೀಯ ಸಂಘದಿಂದ ಪ್ರತಿಭಟನೆ

Update: 2018-01-02 20:26 IST

ಚಾಮರಾಜನಗರ,ಜ.2: 1956 ರಲ್ಲಿ ಸ್ಥಾಪನೆಯಾದ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸಂಸ್ಥೆಯನ್ನು ಮುಚ್ಚಿ ನ್ಯಾಷನಲ್ ಕಮೀಶನನ್ನು ಜಾರಿಗೆತರುವ ಕಾಯ್ದೆಯನ್ನು ಸಂಸತ್ ಅಧಿವೇಶನದಲ್ಲಿ ಮಂಡಿಸಲಾಗುತ್ತಿದೆ. ಇದು ಅತ್ಯಂತ ದುರಾದೃಷ್ಪಕರ ಸಂಗತಿಯಾಗಿದ್ದು,  ಈ ಕಾಯ್ದೆ ಜಾರಿಗೆ ಬಂದ ದಿನ ವೈದ್ಯಕೀಯ ಕ್ಷೇತ್ರದ ಕರಾಳ ದಿನವಾಗಲಿದೆ ಎಂದು ಚಾಮರಾಜನಗರದ ಭಾರತೀಯ ವೈದ್ಯಕೀಯ ಸಂಘ ಹಾಗೂ  ವೈದ್ಯಕೀಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾಸ್ಪತ್ರೆಯ ಮುಂಭಾಗದಿಂದ ಪ್ರತಿಭಟನಾ ಮರವಣಿಗೆ ನಡೆಸಿ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಂಸ್ಥೆಯನ್ನು ಮುಚ್ಚಲು ಹೊರಟಿರುವುದು ಎಷ್ಟರ ಮಟ್ಟಿಗೆ ಸರಿ.ಒಂದು ವೇಳೆ ಕೆಲವು  ಕಾನೂನಾತ್ಮಕ ಬದಲವಣೆಗಳು ವೈದ್ಯಕೀಯ ಶಿಕ್ಷಣದ ಗುಣಮಟ್ಟದ ಕಾರಣಕ್ಕೆ ಬೇಕಾದರೆ,ಸದ್ಯ ಇರುವ ಇಂಡಿಯನ್ ಮೆಡಿಕಲ್ ಕೌನ್ಸಿಲ್ ಕಾಯ್ದೆಗೇ ಅರ್ಹ ತಿದ್ದುಪಡಿಗಳನ್ನು ತರಬಹುದಾಗಿದೆ. ಅದನ್ನು ಬಿಟ್ಟು ಒಂದು ಕಾಯ್ದೆಯ ಬದಲಿಗೆ ಮತ್ತೊಂದು ಕಾಯ್ದೆಯನ್ನು ತರಲು ಹೊರಟಿರುವುದು ಸರಿಯಲ್ಲ. ಈ ಕಾಯ್ದೆಯು ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಪ್ರಪಾತಕ್ಕೆ ತಳ್ಳುವುದಲ್ಲದೆ, ವೈದ್ಯಕೀಯ ವಿದ್ಯಾರ್ಥಿಗಳ ಮತ್ತು ವೈದ್ಯರ ಆತ್ಮ ವಿಶ್ವಾಸ ಕಿತ್ತುಕೊಳ್ಳುತ್ತಿದೆ ಎಂದು ಮೆಡಿಕಲ್ ವಿದ್ಯಾರ್ಥಿಗಳು ತಿಳಿಸಿದರು.

ರಾಜ್ಯದಲ್ಲಿ ಶೇಕಡ 80ರಷ್ಟು ವೈದ್ಯಕೀಯ ಸೀಟುಗಳ ಶುಲ್ಕವನ್ನು ನಿಯಂತ್ರಿಸುವ ಹಕ್ಕನ್ನು ರಾಜ್ಯ ಸರ್ಕಾರವು ಉಳಿಸಿಕೊಂಡಿದ್ದರೆ ಮುಂದಿನ ದಿನಗಳಲ್ಲಿ ಅದು ಶೇಕಡ 40ರಷ್ಟು ವೈದ್ಯಕೀಯ ಸೀಟುಗಳಿಗೆ ಮಾತ್ರ ಅನ್ವಯವಾಗುತ್ತದೆ. ಹೀಗಾದಾಗ ಶೇಕಡ 60ರಷ್ಟು ವೈದ್ಯಕೀಯ ಸೀಟುಗಳ ಶುಲ್ಕ ನಿಗದಿಯ ಅವಕಾಶವನ್ನು ವೈದ್ಯಕೀಯ ಕಾಲೇಜುಗಳು ಪಡೆದುಕೊಳ್ಳುತ್ತವೆ. ಇದರಿಂದಾಗಿ ತಮ್ಮ ಮಕ್ಕಳನ್ನು ವೈದ್ಯರನ್ನಾಗಿ ಮಾಡಬೇಕೆಂಬ ಬಹುತೇಕ ಪೋಷಕರ ಆಸೆಗೆ ಪೆಟ್ಟು ಬೀಳುತ್ತದೆ. ಈ ಪ್ರಕಾರ ಬಡವರು, ಮಧ್ಯಮ ವರ್ಗದವರು ವೈದ್ಯಕೀಯ ಶಿಕ್ಷಣಸ ಆಸೆಯನ್ನೇ ಕೈ ಬಿಡಬೇಕಾಗುತ್ತದೆ. ಈ ಕಾಯ್ದೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಮೆರವಣಿಗೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಗಾಯತ್ರಿ ಅವರಿಗೆ ಐ.ಎಂ.ಎ ಸಂಘದ ಅಧ್ಯಕ್ಷರಾದ ಡಾ.ಬಸವರಾಜೇಂದ್ರ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಡಾ.ನಾಗರ್ಜೂನ್, ಕಾರ್ಯದರ್ಶಿ ಡಾ.ಶ್ವೇತಾ ಶಶಿಧರ್,ಉಪಾಧ್ಯಕ್ಷರು ಡಾ.ಮಹೇಶ್, ಡಾ.ಗಿರಿಶ್ ಸಹ ಪ್ರಾಧ್ಯಪಕರು ವೈದ್ಯಕೀಯ ಕಾಲೇಜು, ಡಾ.ಉಮೇಶ್,ಚಾಮರಾಜನಗರ ವೈದ್ಯಕೀಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು, ಅಶ್ವಿನಿ ಡಯಗ್ಟಿಟಿಕ್ ಸೆಂಟರ್, ಕ್ಷೇಮ ಅಸ್ಪತ್ರೆಯ ಸಿಬಂದ್ದಿಗಳು ಹಾಗೂ ಇನ್ನು ಮುಂತಾದವರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News