×
Ad

ಮಂಡ್ಯ: ಭೂಮಿಗೆ ನ್ಯಾಯಯುತ ಬೆಲೆಗೆ ಒತ್ತಾಯಿಸಿ ರೈತರ ಪ್ರತಿಭಟನೆ

Update: 2018-01-02 22:29 IST

ಮಂಡ್ಯ, ಜ.2: ಕರ್ನಾಟಕ ಗೃಹ ಮಂಡಳಿಯು, ರೈತರ ಜಮೀನಿಗೆ ನ್ಯಾಯಯುತ ಬೆಲೆ ನೀಡಬೇಕು ಎಂದು ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಎಚಾಕನಹಳ್ಳಿ ಗ್ರಾಮಸ್ಥರು ಮಂಗಳವಾರ  ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.

ಕರ್ನಾಟಕ ಗೃಹ ಮಂಡಳಿಯು 2014ರಲ್ಲಿ ವಸತಿ ಉದ್ದೇಶಕ್ಕಾಗಿ ಎಲೆಚಾಕನಹಳ್ಳಿ ಗ್ರಾಮದ ಸರ್ವೆ ನಂಬರಲ್ಲಿದ್ದ 199 ಎಕರೆ ಭೂಮಿಯನ್ನು ಭೂಸ್ವಾಧೀನ ಮಾಡಿಕೊಂಡಿದ್ದು, ದರ ನಿಗದಿಯಲ್ಲಿ ತಾರತಮ್ಯ ಮಾಡಲಾಗಿದೆ ಎಂಬುದು ಗ್ರಾಮಸ್ಥರ ಆರೋಪ. ಎಕರೆಗೆ  1,73,946 ರೂ.ನಂತೆ 126 ಎಕರೆಗೆ ಆದೇಶ ಹೊರಡಿಸಿದೆ. ಉಳಿದ 46 ಎಕರೆಗೆ 11.70 ಲಕ್ಷ ನಿಗದಿ ಮಾಡಿ ತಾರತಮ್ಯ ಮಾಡಲಾಗಿದೆ. ಇದೇ ಪ್ರದೇಶದಲ್ಲಿ 2011-12ರಲ್ಲೇ ರೈಲ್ವೆ ಇಲಾಖೆಯು 1 ಎಕರೆಗೆ 40 ಲಕ್ಷ ರೂ. ನೀಡಿದೆ. ಇತ್ತೀಚೆಗೆ ಮೈಸೂರು-ಬೆಂಗಳೂರು ಹೆದ್ದಾರಿಯ ಪಕ್ಕದ ಜಮೀನಿಗೆ 1 ಗುಂಟೆಗೆ 2.70 ಲಕ್ಷ ರೂ. ಘೋಷಿಸಿದೆ. ಆದರೆ, ಕರ್ನಾಟಕ ಗೃಹ ಮಂಡಳಿ ರೈತರಿಗೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.

ಎಲೆಚಾಕನಹಳ್ಳಿ ಗ್ರಾಮದ ರೈತರು ತುಂಡು ಭೂಮಿ ಹೊಂದಿದ್ದು, ಇದರ ಬಗ್ಗೆ ಇಲಾಖೆಯ ಮುಖ್ಯಸ್ಥರನ್ನು ಕೇಳಿದರೆ ನಿಮಗೆ ನ್ಯಾಯ ಬೇಕಾದರೆ ನ್ಯಾಯಾಲಯಕ್ಕೆ ಹೋಗಿ ಎನ್ನುತ್ತಾರೆ. ಗ್ರಾಮಸ್ಥರು ಇದೇ ಹಣ ನಂಬಿ ಮಕ್ಕಳಿಗೆ ಮದುವೆ, ಶಿಕ್ಷಣ, ಆರೋಗ್ಯಕ್ಕಾಗಿ ಸಾಲ ಮಾಡಿಕೊಂಡಿದ್ದೇವೆ. ನ್ಯಾಯಾಲಯಕ್ಕೆ ಹೋಗಲು ನಮ್ಮ ಬಳಿ ಹಣವಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ದಾರಿ ಬಿಟ್ಟರೆ ಬೇರೆ ದಾರಿಯಲ್ಲ. ಆದ್ದರಿಂದ ಕೂಡಲೇ ಸರಕಾರ ಹಾಗು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯಯುತ ಬೆಲೆ ಕೊಡಿಸಬೇಕು ಎಂದು ಒತ್ತಾಯಿಸಿದರು.

ಪ್ರೊ.ಶಂಕರೇಗೌಡ, ಬೋರೇಗೌಡ, ಆತ್ಮಾನಂದ ಸೇರಿದಂತೆ ಹಲವು ಮುಖಂಡರು ನೇತೃತ್ವವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News