×
Ad

ಶಿವಮೊಗ್ಗ: ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ವೈದ್ಯರಿಂದ ಬೃಹತ್ ಪ್ರತಿಭಟನೆ

Update: 2018-01-02 22:59 IST

ಶಿವಮೊಗ್ಗ, ಜ. 2: ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‍ಎಂಸಿ) ರಚನೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ವಿರೋಧಿಸಿ ಭಾರತೀಯ ವೈದ್ಯಕೀಯ ಪರಿಷತ್ (ಐಎಂಎ) ಜಿಲ್ಲಾ ಶಾಖೆಯು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಅರ್ಪಿಸಿತು. 

ನೀತಿ ಆಯೋಗದ ಶಿಫಾರಸ್ಸಿನಂತೆ ಕೇಂದ್ರ ಸರ್ಕಾರವು ಹಾಲಿ ನಡೆಯುತ್ತಿರುವ ಸಂಸತ್ ಅಧಿವೇಶನದಲ್ಲೇ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚನೆಗೆ ಮುಂದಾಗಿರುವುದು ಸರಿಯಲ್ಲ. ಇದೊಂದು ಆತುರದ ಕ್ರಮವಾಗಿದೆ. 1956 ರಲ್ಲಿ ಸ್ಥಾಪಿತವಾದ ಭಾರತೀಯ ವೈದ್ಯಕೀಯ ಪರಿಷತ್ (ಎಂಸಿಐ) ಮುಚ್ಚಲು ಹೊರಟಿರುವುದು ವೈದ್ಯಕೀಯ ಕ್ಷೇತ್ರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಎಂಸಿಐನಲ್ಲಿ ಲೋಪದೋಷವಿದ್ದರೆ ಸೂಕ್ತ ಬದಲಾವಣೆಗೊಳಪಡಿಸಬಹುದಾಗಿದೆ. ಮಾರ್ಪಾಡಗೊಳಿಸಲು ಕೇಂದ್ರ ಸರ್ಕಾರ ಹಲವು ಅವಕಾಶಗಳಿವೆ. ಆದರೆ ಲೋಪದೋಷವಿದೆ ಎಂದು ಹೇಳಿ ಇಡೀ ಎಂಸಿಐ ರಚನೆಯನ್ನೇ ರದ್ದುಗೊಳಿಸಲು ಮುಂದಾಗುವುದು ಸರಿಯಲ್ಲ. ಹೊಸ ಕಾಯ್ದೆ ಜಾರಿಗೊಳಿಸಿ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಪ್ರಪಾತಕ್ಕೆ ತಳ್ಳಲು ಯತ್ನಿಸಲಾಗುತ್ತಿದೆ. ಜೊತೆಗೆ ವೈದ್ಯಕೀಯ ವಿದ್ಯಾರ್ಥಿಗಳ ಆತ್ಮವಿಶ್ವಾಸವನ್ನು ಕಿತ್ತುಕೊಳ್ಳುವುದು ಇದರ ಗುರಿ ಎಂಬಂತೆ ಗೋಚರವಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಹೊಸ ಆಯೋಗ ಜಾರಿಯಾದಲ್ಲಿ 64 ಸದಸ್ಯರ ತಂಡವಿರಲಿದೆ. ಆದರೆ ಇದರಲ್ಲಿ ಚುನಾಯಿತರ ಸಂಖ್ಯೆ ಕೇವಲ 5 ಮಾತ್ರವಾಗಿರಲಿದೆ. ಉಳಿದವರು ಕೇಂದ್ರದ ನಾಮ ನಿರ್ದೇಶಿತ ಮತ್ತು ಅಧಿಕಾರಿ ಶಾಹಿಗಳಾಗಿರಲಿದ್ದಾರೆ. ಆಡಳಿತ ಪಕ್ಷದ ಮಾತಿಗೆ ತಲೆಯಾಡಿಸುವ ಸದಸ್ಯರಾಗಿರುತ್ತಾರೆ. ಇದರಿಂದ ಶಿಕ್ಷಣದ ಗುಣಮಟ್ಟ ಹಾಳಾಗುವುದರಲ್ಲಿ ಅನುಮಾನವಿಲ್ಲವಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ಈ ಆಯೋಗದ ಜಾರಿಯಿಂದಾಗುವ ಅನಾಹುತವನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಬೇಕು. ಈಗ ಶೇ.80 ರಷ್ಟು ವೈದ್ಯಕೀಯ ಸೀಟುಗಳ ಶುಲ್ಕವನ್ನು ನಿಯಂತ್ರಿಸುವ ಹಕ್ಕು ರಾಜ್ಯ ಸರ್ಕಾರದ್ದಾಗಿದೆ. ಆದರೆ ಆಯೋಗ ಜಾರಿಯಾದಲ್ಲಿ ಶೇ. 40 ಕ್ಕೆ ಇಳಿಯುತ್ತದೆ. ಇದರಿಂದಾಗಿ ವೈದ್ಯಕೀಯ ಶಿಕ್ಷಣ ಬಡ ಮತ್ತು  ಮಧ್ಯಮ ವರ್ಗದ ಮಕ್ಕಳಿಗೆ ವೈದ್ಯಕೀಯ ಶಿಕ್ಷಣ ಗಗನ ಕುಸುಮವಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ. 

ಪ್ರತಿಭಟನೆ ನೇತೃತ್ವವನ್ನು ಐಎಂಎ ಅಧ್ಯಕ್ಷ ಡಾ. ಆರ್.ಬಿ.ಪುರುಷೋತ್ತಮ್ ವಹಿಸಿದ್ದರು. ಗೌರವ ಕಾರ್ಯದರ್ಶಿ ಡಾ. ಕೆ.ಆರ್. ರವೀಶ್, ಉಪಾಧ್ಯಕ್ಷ ಡಾ. ಪಿ.ಕೆ. ಪೈ, ವೈದ್ಯರಾದ ಕೆ.ಆರ್. ಶ್ರೀಧರ್, ರಜನಿ ಪೈ, ಎನ್.ಎಲ್. ನಾಯಕ್, ಶ್ರೀಕಾಂತ್ ಹೆಗಡೆ, ಧನಂಜಯ ಸರ್ಜಿ, ಡಾ. ಪಿ.ಕೆ. ಪೈ ಸೇರಿದಂತೆ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News