ದಾವಣಗೆರೆ: ಎನ್‍ಎಂಸಿ ವಿರೋಧಿಸಿ ಮುಷ್ಕರ
ದಾವಣಗೆರೆ,ಜ.2: ಎನ್‍ಎಂಸಿ ವಿರೋಧಿಸಿ ರಾಷ್ಟ್ರ ವ್ಯಾಪಿ ಕರೆಯ ಮೇರೆಗೆ ನಗರ, ಜಿಲ್ಲಾದ್ಯಂತ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದ ಸೇವೆ ಸ್ಥಗಿತಗೊಳಿಸುವ ಮೂಲಕ ಮಂಗಳವಾರ ಮುಷ್ಕರ ನಡೆಸಿದ್ದರಿಂದ ರೋಗಿಗಳು ಆತಂಕಕ್ಕೊಳಗಾದರು.
ಎನ್‍ಎಂಸಿ ಕಾಯ್ದೆ ಜಾರಿಗೊಳಿಸದಂತೆ ಐಎಂಎ ಕರೆಯ ಮೇರೆಗೆ ನಗರ, ಜಿಲ್ಲಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಬೆಳಿಗ್ಗೆ 6ರಿಂದ 12 ತಾಸುಗಳ ಕಾಲ ಹೊರ ರೋಗಿಗಳ ಸೇವೆಯನ್ನು ಸ್ಥಗಿತಗೊಳಿಸಿದ್ದರಿಂದ ರೋಗಿಗಳು ಪರದಾಡಿದರಾದರೂ, ತುರ್ತು ಚಿಕಿತ್ಸೆ ಮಾತ್ರ ಲಭ್ಯವಿದ್ದುದು ಬಹುತೇಕ ಕಡೆಗಳಲ್ಲಿ ಕಂಡು ಬಂತು. ಭಾರತೀಯ ವೈದ್ಯಕೀಯ ಮಂಡಳಿ ಕರೆಯ ಮೇರೆಗೆ ನಗರವೂ ಸೇರಿದಂತೆ ಜಿಲ್ಲೆಯ ಆರೂ ತಾಲೂಕು ಕೇಂದ್ರಗಳಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಚಿಕಿತ್ಸಾ ವಿಭಾಗ ಬಂದ್ ಮಾಡಲಾಗಿತ್ತು. ರೋಗಿಗಳು ಚಿಕಿತ್ಸೆ ಸಿಗದೇ ಪರದಾಡಿದರು. ಓಪಿಡಿ ಬಂದ್ ಮಾಡಿ ಮುಷ್ಕರ ನಡೆಸಲಾಯಿತಾದರೂ, ತುರ್ತು ಚಿಕಿತ್ಸೆ ಸೌಲಭ್ಯ, ಔಷಧಿ ಅಂಗಡಿಗಳು, ಒಳ ರೋಗಿಗಳ ವಿಭಾಗಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು.
ಮುಷ್ಕರ ಬೆಂಬಲಿಸಿ ಹೊರ ರೋಗಿಗಳ ಸೇವೆಯನ್ನು ವೈದ್ಯರು ಸ್ಥಗಿತಗೊಳಿಸಿದ ಬಗ್ಗೆ ಅರಿವಿಲ್ಲದ ರೋಗಿಗಳು ಆಸ್ಪತ್ರೆಗೆ ಬಂದರೆ, ಇಂದು ಓಪಿಡಿ ಇಲ್ಲವೆಂದು ಹೇಳಿ ಕಳಿಸಲಾಗುತ್ತಿತ್ತು. ಅನಾರೋಗ್ಯದಿಂದಾಗಿ ನಿತ್ರಾಣರಾಗಿದ್ದ ಮಕ್ಕಳು, ಮಹಿಳೆಯರು, ಗರ್ಭಿಣಿ, ಬಾಣಂತಿಯರು, ವಯೋವೃದ್ಧರು ಓಪಿಡಿ ಸೇವೆ ಇಲ್ಲದ್ದರಿಂದ ಪರದಾಡಿದರು. ಖಾಸಗಿ ಆಸ್ಪತ್ರೆ ಓಪಿಡಿ ಸೇವೆ ಇಲ್ಲದ್ದರಿಂದ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಲು ರೋಗಿಗಳು ತ್ರಾಸ ಅನುಭವಿಸಿದರು.
ದಾವಣಗೆರೆ, ಹರಿಹರ, ಚನ್ನಗಿರಿ, ಹರಪನಹಳ್ಳಿ, ಜಗಳೂರು, ಹೊನ್ನಾಳಿ ತಾಲೂಕಿನೆಲ್ಲೆಡೆ ಇದೇ ಪರಿಸ್ಥಿತಿ ಮುಂದುವರಿದಿತ್ತು. ಜಿಲ್ಲಾ ಕೇಂದ್ರದಲ್ಲಿ 75 ನರ್ಸಿಂಗ್ ಹೋಂ, 450 ಕ್ಲಿನಿಕ್‍ಗಳಿದ್ದು, 800-1000 ಸಾವಿರ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರ ಜಾರಿಗೊಳಿಸಲು ಹೊರಟ ಕೆಪಿಎಂಇ ಕಾಯ್ದೆ ಅವೈಜ್ಞಾನಿಕವಾಗಿದ್ದು, ಭಾರತೀಯ ವೈದ್ಯಕೀಯ ಪರಿಷತ್(ಎಂಸಿಐ) ರದ್ಧು ಮಾಡಿ, ಅದರ ಬದಲಿಗೆ ರಾಷ್ಟ್ರೀಯ ವೈದ್ಯ ಆಯೋಗ ಮಸೂದೆ-2017ನ್ನು ಮಂಡಿಸುವ ವಿಚಾರವನ್ನು ಸರ್ಕಾರ ಕೈಬಿಡಬೇಕು ಎಂಬುದಾಗಿ ಮುಷ್ಕರ ನಿರತ ವೈದ್ಯರು ಒತ್ತಾಯಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಐಎಂಎ ಮುಖಂಡರು ಮನವಿ ಸಲ್ಲಿಸಿದರು. ಈ ಸಂದರ್ಭ ಕಾರ್ಯದರ್ಶಿ ಡಾ. ಪ್ರವೀಣ್ ಎಂ. ಅಣ್ವೇಕರ್, ವೈದ್ಯರ ಸಂಘದ ಅಧ್ಯಕ್ಷ ಡಾ.ಜಿ.ಸಿ. ಈಡಗುಂಜಿ, ಡಾ.ದಿನೇಶ್ ಎಲ್. ಜಾದವ್, ಡಾ.ಶಿವಕುಮಾರ್ ಕೆ.ಪಿ., ಡಾ.ಎ.ಎಂ. ಶಿವಕುಮಾರ್, ಡಾ.ಸುನಿಲ್ ಎಸ್. ಬ್ಯಾಡಗಿ, ಡಾ.ಮೂರ್ತಿ ಪ್ರಸಾದ್ ಮತ್ತಿತರರಿದ್ದರು.