ಶಿವಮೊಗ್ಗ: ಸಹೋದರನ ಹತ್ಯೆ ಪ್ರಕರಣ; ಕುಖ್ಯಾತ ರೌಡಿ ಶೀಟರ್‍ಗೆ ಜೀವಾವಧಿ ಶಿಕ್ಷೆ
ಶಿವಮೊಗ್ಗ, ಜ. 3: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಡಹುಟ್ಟಿದ ಸಹೋದರನನ್ನೆ ಹತ್ಯೆ ನಡೆಸಿದ್ದ ಕುಖ್ಯಾತ ರೌಡಿ ಶೀಟರ್ ಓರ್ವನಿಗೆ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ, ದಂಡ ವಿಧಿಸಿ ತೀರ್ಪು ನೀಡಿದೆ.
ವಿದ್ಯಾನಗರದ ನಿವಾಸಿ ಶ್ರೀನಿವಾಸ ಯಾನೆ ಹುರುಳಿಕಾಳು ಸೀನ ಶಿಕ್ಷೆಗೊಳಗಾದ ರೌಡಿ ಶೀಟರ್ ಎಂದು ಗುರುತಿಸಲಾಗಿದೆ. ಜೀವಾವಧಿ ಶಿಕ್ಷೆಯ ಜೊತೆಗೆ 50 ಸಾವಿರ ರೂ. ದಂಡ ಕೂಡ ವಿಧಿಸಿ ನ್ಯಾಯಾಧೀಶ ಧರ್ಮಣ್ಣಗೌಡರ್‍ರವರು ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ.ಯಳಗೇರಿಯವರು ವಾದ ಮಂಡಿಸಿದ್ದರು.
ಘಟನೆ ಹಿನ್ನೆಲೆ: ಶಿಕ್ಷೆಗೊಳಗಾದ ಶ್ರೀನಿವಾಸನು, ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 2014 ಡಿಸೆಂಬರ್ 21 ರಂದು ಜಮೀನಿನಿಂದ ಸಂಜೆ ಮನೆಗೆ ಹಿಂದಿರುಗುತ್ತಿದ್ದ ಸಹೋದರ ಚಂದ್ರುಶೇಖರನನ್ನು ಅಡ್ಡಗಟ್ಟಿ ಲಾಂಗ್‍ನಿಂದ ಮನಸೋಇಚ್ಚೆ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದ. ಸಾಕ್ಷ್ಯ ನಾಶದ ಉದ್ದೇಶದಿಂದ ಮೃತದೇಹವನ್ನು ಚಾನಲ್‍ಗೆ ಎಸೆದಿದ್ದ. ರಕ್ತಸಿಕ್ತವಾದ ಬಟ್ಟೆ, ಹತ್ಯೆಗೆ ಬಳಸಿದ್ದ ಲಾಂಗ್‍ನ್ನು ನೀರಿನಲ್ಲಿ ತೊಳೆದು ಮುಚ್ಚಿಟ್ಟಿದ್ದ. ನಂತರ ಬೈಕ್‍ನ್ನು ನಗರದ ಪಾರ್ಕಿಂಗ್ ತಾಣವೊಂದರಲ್ಲಿ ನಿಲ್ಲಿಸಿ ಬೆಂಗಳೂರಿಗೆ ಪರಾರಿಯಾಗಿ, ತಲೆಮರೆಸಿಕೊಂಡಿದ್ದ.
ಈ ಸಂಬಂದ ಕೊಲೆಗೀಡಾದ ಚಂದ್ರಶೇಖರ್ ಪುತ್ರನು ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ಶ್ರೀನಿವಾಸ್‍ನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು. ಆತನ ವಿರುದ್ದ ಕೊಲೆ ಪ್ರಕರಣ ಸೇರಿದಂತೆ ಐಪಿಸಿಯ ವಿವಿಧ ಕಲಂಗಳ ಅಡಿ ಕೇಸ್ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ನಂತರ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದ ವಿಚಾರಣೆಯಲ್ಲಿ ಶ್ರೀನಿವಾಸನ ಕೃತ್ಯ ಸಾಬೀತಾಗಿದ್ದು, ನ್ಯಾಯಾಧೀಶರು ಶಿಕ್ಷೆ - ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ನಟೋರಿಯಸ್: ಶ್ರೀನಿವಾಸನು ಕುಖ್ಯಾತ ರೌಡಿ ಆಸಾಮಿಯಾಗಿದ್ದ. ಹಲವು ಅಪರಾಧ ಕೃತ್ಯಗಳಲ್ಲಿ ಈತ ಭಾಗಿಯಾಗಿದ್ದ. ಈ ಹಿಂದೆ ಎರಡು ಹತ್ಯೆ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಮುಕ್ತಗೊಂಡಿದ್ದ ಎಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿದೆ.
ಸಹೋದರನ ಹತ್ಯೆ ಪ್ರಕರಣದಲ್ಲಿ ಶ್ರೀನಿವಾಸನು ಸಾಕ್ಷ್ಯಾಧಾರಗಳ ಕೊರತೆಯಿಂದ ಬಚಾವಾಗದಂತೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆಯವರು ಸೂಕ್ತ ಕ್ರಮ ಕೈಗೊಂಡಿದ್ದರು. ಪ್ರಕರಣದ ಸಾಕ್ಷ್ಯಗಳಿಗೆ ಸೂಕ್ತ ಭದ್ರತೆಯ ಏರ್ಪಾಡು ಮಾಡಿದ್ದರು. ಧೈರ್ಯ ತುಂಬುವ ಕೆಲಸ ಮಾಡಿದ್ದರು. ಹಾಗೆಯೇ ಸರ್ಕಾರಿ ಅಭಿಯೋಜಕ ವಿ.ಜಿ.ಯಳಗೇರಿಯವರು ಸಮರ್ಥ ವಾದ ಮಂಡನೆ ಮಾಡಿದ್ದರು. ಇದರ ಫಲವಾಗಿ ನ್ಯಾಯಾಲಯದ ವಿಚಾರಣೆಯಲ್ಲಿ ಶ್ರೀನಿವಾಸನ ಕೃತ್ಯ ಸಾಬೀತಾಗಿ, ಜೀವಾವಧಿ ಶಿಕ್ಷೆಗೆ ಗುರಿಯಾಗುವಂತಾಗಿದೆ.