×
Ad

ಪ್ರಧಾನಿ ಮೋದಿ ಮೌನವಾಗಿರುವುದು ಏಕೆ : ಮಾಜಿ ಸಚಿವ ಜೀವಿಜಯ ಪ್ರಶ್ನೆ

Update: 2018-01-03 19:55 IST

ಮಡಿಕೇರಿ, ಜ.3: ದೇಶಾದ್ಯಂತ ದಲಿತರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿವೆ. ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನದ ಕುರಿತು ಅವಹೇಳನಕಾರಿಯಾಗಿ ಮಾತನಾಡಿದರು ಪ್ರಧಾನಿ ನರೇಂದ್ರ ಮೋದಿ, ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಮೌನಕ್ಕೆ ಶರಣಾಗಿದ್ದಾರೆ. ಆ ಮೂಲಕ ಕೇಂದ್ರ ಸರಕಾರ ದಲಿತ ವಿರೋಧಿ ನಿಲುವು ಹೊಂದಿದೆ ಎಂಬುದನ್ನು ಬಿಂಬಿಸಿದ್ದಾರೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಿ.ಎ.ಜೀವಿಜಯ ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಇತ್ತೀಚೆಗೆ ನಡೆದ ದಲಿತ ಬಾಲಕಿ ಅತ್ಯಾಚಾರ ಮತ್ತು ಭೀಕರ ಹತ್ಯೆಯನ್ನು ಖಂಡಿಸಿ ಕೊಡಗು ಜಿಲ್ಲಾ ಜಾತ್ಯತೀತ ಜನತಾದಳದ ಕಾರ್ಯಕರ್ತರು ನಡೆಸಿದ ಧರಣಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಕೇಂದ್ರ ಸರಕಾರ ದಲಿತ ವಿರೋಧಿ ಸರಕಾರವಾಗಿದೆ. ಸಂವಿಧಾನ ವಿರೋಧಿ ಹೇಳಿಕೆಯನ್ನು ನೀಡಿರುವ ಸಚಿವ ಅನಂತಕುಮಾರ್ ಹೆಗಡೆಯನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕೆಂದು ಮಾಜಿ ಸಚಿವ ಜೆಡಿಎಸ್ ಮುಖಂಡ ಬಿ.ಎ.ಜೀವಿಜಯ ಹಾಗೂ ಪ್ರತಿಭಟನಾಕಾರರು ಆಗ್ರಹಿಸಿದರು.

ನಗರದ ಗಾಂಧಿ ಮಂಟಪದಲ್ಲಿ ಸಮಾವೇಶಗೊಂಡ ಧರಣಿನಿರತರು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿ ದಲಿತ ಬಾಲಕಿಯ ಹತ್ಯೆಯನ್ನು ಮತ್ತು ಅನಂತಕುಮಾರ್ ಹೆಗಡೆಯ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸಿದರು.

ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದ್ದು, ಹೆಣ್ಣು ಮಕ್ಕಳು ರಸ್ತೆಯಲ್ಲಿ ನಡೆಯಲು ಭಯಪಡುವಂತಾಗಿದೆ. ಕಾನೂನು ಸುವ್ಯವಸ್ಥೆ ರಾಜ್ಯದಲ್ಲಿ ಹದಗೆಟ್ಟಿದ್ದು, ಕಾಂಗ್ರೆಸ್ ಸರರ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ದಾನಮ್ಮ ಹತ್ಯೆ ಆರೋಪಿಗಳನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

 ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ದಾನಮ್ಮಳ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಮಾನವ ಸಮಾಜವೇ ತಲೆತಗ್ಗಿಸುವ ವಿಚಾರವಾಗಿದೆ. ಇಂದಿಗೂ ಪ್ರಕರಣದಲ್ಲಿ ಭಾಗಿಯಾದ ಕೆಲವು ಆರೋಪಿಗಳು ತಲೆ ಮರೆಸಿಕೊಂಡಿರುವುದು ರಾಜ್ಯ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದನ್ನು ಬಿಂಬಿಸುತ್ತಿದೆ ಎಂದು ಆರೋಪಿಸಿದರು.

  ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಎಂ.ಎಂ.ಶರೀಫ್, ಜೆಡಿಎಸ್ ಜಿಲ್ಲಾ ವಕ್ತಾರ ಆದಿಲ್ ಪಾಷ, ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಮನ್ಸೂರ್ ಅಲಿ, ಡಾ. ಯಾಲದಾಳು ಮನೋಜ್ ಬೋಪಯ್ಯ, ರಾಜೇಶ್ ಯಲ್ಲಪ್ಪ, ಜಿಲ್ಲಾ ಪ್ರಚಾರಸಮಿತಿ ಅಧ್ಯಕ್ಷ ಕೆ.ಎಂ.ಗಣೇಶ್, ಸೋಮವಾರಪೇಟೆ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್.ವಿಶ್ವ, ಶಿವದಾಸ್, ಪಿ.ಎಸ್.ಭರತ್, ಮಡಿಕೇರಿ ನಗರಸಭಾ ಮಾಜಿ ಸದಸ್ಯ ಅಶ್ರಫ್, ಕಡ್ಡಿ ಸುಂದರ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News