ಶಿವಮೊಗ್ಗ: ಬಿ.ಎಸ್.ಯಡಿಯೂರಪ್ಪ ವಿರುದ್ದ ಎಂಎಲ್‍ಸಿ ಆರ್.ಪ್ರಸನ್ನಕುಮಾರ್ ವಾಗ್ದಾಳಿ
ಶಿವಮೊಗ್ಗ, ಜ. 3: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪರಿವರ್ತನಾ ಯಾತ್ರೆಯಲ್ಲಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ಯಾತ್ರೆಯಿಂದ ಯಾವ ಪರಿವರ್ತನೆಯೂ ಆಗಿಲ್ಲ. ಜೊತೆಗೆ ಅವರ ವರ್ತನೆಯೂ ಸರಿಯಾಗಿಲ್ಲ ಎಂದು ವಿಧಾನಪತಿಷತ್ ಸದಸ್ಯ ಆರ್. ಪ್ರಸನ್ನಕುಮಾರ್ ಟೀಕಾಪ್ರಹಾರ ನಡೆಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ವಿಐಎಸ್‍ಎಲ್ ಮತ್ತು ಎಂಪಿಎಂ ಕಾರ್ಖಾನೆ ಅಭಿವೃದ್ದಿಗೆ ಪ್ರಾಮಾಣಿಕ ಗಮನಹರಿಸದ ಬಿ.ಎಸ್.ಯಡಿಯೂರಪ್ಪರವರು ಚುನಾವಣೆಯ ಸಂದರ್ಭದಲ್ಲಿ ಮತ್ತೆ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸುವ ಭರವಸೆ ನೀಡಿ ಅಲ್ಲಿನ ಕಾರ್ಮಿಕರನ್ನು ಮರುಳುಗೊಳಿಸುತ್ತಿದ್ದಾರೆ ಎಂದು ದೂರಿದರು.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದ್ದರೂ ಸಹಾ ವಿಐಎಸ್‍ಎಸಲ್ ಅಭಿವೃದ್ಧಿ ಸಾಧ್ಯವಾಗಿಲ್ಲ. ಕೇಂದ್ರ ಉಕ್ಕು ಸಚಿವರನ್ನು ಈ ಹಿಂದೆ ಕರೆಯಿಸಿ ಅವರಿಂದ ಸಾವಿರಾರು ಕೋಟಿ ರೂ. ನೆರವಿನ ಭರವಸೆಯನ್ನು ನೀಡಲಾಗಿತ್ತಾದರೂ ಒಂದು ರೂಪಾಯಿಯ ನೆರವು ಕೂಡಾ ಇಲ್ಲಿಯವರೆಗೆ ಸಿಕ್ಕಿಲ್ಲ ಎನ್ನುವುದನ್ನು ಕಾರ್ಮಿಕರು ನೆನಪಿಡಬೇಕು ಎಂದರು.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಯಡಿಯೂರಪ್ಪ ಅವರಿಗೆ ವಿಐಎಸ್‍ಎಲ್ ಮತ್ತು ಎಂಪಿಎಂ ನೆನಪಾಗಿದೆ. ಮತ್ತೆ ಕೇಂದ್ರದಿಂದ ಪುನಶ್ಚೇತನ ಗೊಳಿಸುವ ಆಶ್ವಾಸನೆ ನೀಡುತ್ತಿದ್ದಾರೆ. ಇದೆಲ್ಲ ಚುನಾವಣೆಯ ಗಿಮಿಕ್ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್‍ರವರು ಮಾತಾಡಿ, ಯಡಿಯೂರಪ್ಪ ಅವರು ಅಧಿಕಾರ ಸಿಕ್ಕಾಗ ಜನಪರ ಮತ್ತು ರೈತಪರ ಕೆಲಸ ಮಾಡಲಿಲ್ಲ. ಈಗ ಇವರ ಬಗ್ಗೆ ನೆನಪಾಗಿ ಅನುಕಂಪ ತೋರಿಸುತ್ತಿದ್ದಾರೆ. ಜನರಿಗೆ ಇವರ ಅಧಿಕಾರ ಕಾಲದಲ್ಲಿ ಮಾಡಿದ ಭ್ರಷ್ಟಾಚಾರಗಳ ನೆನಪು ಇನ್ನೂ ಇದೆ ಎನ್ನುವುದನ್ನು ಮರೆಯಬಾರದು ಎಂದರು.
ಗೋಷ್ಠಿಯಲ್ಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪಕ್ಷದ ಪ್ರಮುಖರಾದ ಇಸ್ಮಾಯಿಲ್ ಖಾನ್, ಎಸ್.ಕೆ.ಮರಿಯಪ್ಪ, ಎನ್.ರಮೇಶ್, ವಿಶ್ವನಾಥ ಕಾಶಿ, ಎಸ್.ಪಿ. ಶೇಷಾದ್ರಿ, ಎಸ್.ಪಿ. ದಿನೇಶ್, ಆರಿಫುಲ್ಲಾ, ವಿಜಯಲಕ್ಷ್ಮೀ ಸಿ. ಪಾಟೀಲ್ ಸೇರಿದಂತೆ ಮೊದಲಾದವರಿದ್ದರು.
ಶಿವಮೊಗ್ಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ
ನಗರದಲ್ಲಿ ಸುಮಾರು 236.24 ಕೋಟಿ ರೂ. ಮೊತ್ತದ ವಿವಿಧ ಕಾಮಗಾರಿಗಳಿಗೆ ಅನುಮೋದನೆ ದೊರಕಿದ್ದು, ಇದಕ್ಕೆ ಜ. 6 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸುವರು. ಜೊತೆಗೆ ಸುಮಾರು 174.66 ಕೋಟಿ ರೂ. ಮೌಲ್ಯದ ವಿವಿಧ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸುವರು. ಜ. 6 ರ ಸಂಜೆ 4.30 ಕ್ಕೆ ನೆಹರೂ ಕ್ರೀಡಾಂಗಣದ ಹೊರಭಾಗದಲ್ಲಿ ಲೋಕಾರ್ಪಣೆ ಹಾಗೂ ಉದ್ಘಾಟನೆ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಸೋಗಾನೆಯಲ್ಲಿ ನಿರ್ಮಿಸಲಾದ ಆಧುನಿಕ ಮಾದರಿಯ ಕಾರಾಗೃಹವನ್ನು, ಕೋಟೆ ಪೋಲೀಸ್ ಠಾಣೆಯ ನೂತನ ಕಟ್ಟಡವನ್ನು, ವಾಜಪೇಯಿ ಬಡಾವಣೆಯಲ್ಲಿ ನಿರ್ಮಿಸಲಾಗಿರುವ ಮಹಿಳಾ ಹಾಸ್ಟೆಲ್ ಕಟ್ಟಡವನ್ನು, ಜಿಪಂ ಸಂಪನ್ಮೂಲ ಕೇಂದ್ರದ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂದು ಶಾಸಕ ಕೆ.ಬಿ.ಪ್ರಸನ್ನಕುಮಾರ್ ತಿಳಿಸಿದ್ದಾರೆ.