×
Ad

ಶಿವಮೊಗ್ಗ: ರೈತರ ಸಾಲ ಮನ್ನಾಕ್ಕೆ ಆಗ್ರಹಿಸಿ ಡಿಎಸ್‍ಎಸ್‍ನಿಂದ ಪ್ರತಿಭಟನೆ

Update: 2018-01-03 20:18 IST

ಶಿವಮೊಗ್ಗ,ಜ.3: ಮುಂಬರುವ ರಾಜ್ಯ ಬಜೆಟ್‍ನಲ್ಲಿ ರೈತರ ಸಾಲ ಮನ್ನಾ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ದಲಿತ ಸಂರಕ್ಷಣಾ ಸಮಿತಿಯು ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಅರ್ಪಿಸಿತು.

ದೇಶದ ಬೆನ್ನೆಲುಬಾಗಿರುವ ರೈತ ಇಂದು ಸಂಕಷ್ಟದ ಸ್ಥಿತಿಯಲ್ಲಿದ್ದಾನೆ. ಕಾಲ ಕಾಲಕ್ಕೆ ಸರಿಯಾಗಿ ಮಳೆ ಬಾರದೆ, ಕೈಗೆ ಸಿಕ್ಕೆ ಬೆಳಗೆ ಸರಿಯಾದ ಬೆಲೆ ಸಿಗದೇ  ಕಂಗಾಲಾಗಿದ್ದಾರೆ. ಹತ್ತು ಹಲವು ರೀತಿಯ ಸಂಕಷ್ಟ ಎದುರಿಸುವಂತಾಗಿದೆ. ಸಾಲದ ಹೊರೆಯಿಂದ ಬಳಲುವಂತಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. 

ಪ್ರಸ್ತುತ ರೈತರು ಖರೀದಿಸುವ ಗೊಬ್ಬರ 50 ಕೆಜಿಗೆ 1 ಸಾವಿರ ರೂ ಹಾಗೂ 4 ಕೆಜಿಗೆ ಮೆಕ್ಕೆಜೋಳದ ಬೀಜಕ್ಕೆ 850 ರೂ. ನಿಂದ 1 ಸಾವಿರ ವರೆಗೆ ಬೆಲೆಯಿದೆ. ಆದರೆ ರೈತರು ಬೆಳೆದ ಮೆಕ್ಕೆ ಜೋಳದ ಈಗಿನ ಖರೀದಿ ದರ 1 ಸಾವಿರದಿಂದ 1200 ರೂ. ಮಾತ್ರವಿದೆ. ವೈಜ್ಞಾನಿಕ ಬೆಲೆ ದೊರಕದ ಕಾರಣದಿಂದ ರೈತರು ನಷ್ಟಕ್ಕೀಡಾಗುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

ಇಂತಹ ಸಂಕಷ್ಟಗಳಿಂದ ಜರ್ಜರಿತನಾದ ರೈತ ಕೊನೆಗೆ ತಾನು ಬೆಳೆದ ಅಲ್ಪಸ್ವಲ್ಪ ಬೆಳೆಗೆ ಸರಿಯಾದ ಬೆಲೆ ಸಿಗದೆ ದಿಕ್ಕು ತೋದಂತಾಗಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿರುವ ರೈತನಿಗೆ ಮೆಕ್ಕೆಜೋಳಕ್ಕೆ ಕನಿಷ್ಠ 2 ಸಾವಿರ ರೂ. ಮತ್ತು ಭತ್ತಕ್ಕೆ 2400 ರೂ. ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. 

ರೈತರ ಬಗ್ಗೆ ಕಾಳಜಿ ಇರುವಂತಹ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೂಡಲೇ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪ್ರತಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಭತ್ತ ಮತ್ತು ಮೆಕ್ಕೆಜೋಳದ ಖರೀದಿ ಕೇಂದ್ರಗಳನ್ನು ತೆರೆಯಬೇಕು. 2018 ರ ಬಜೆಟ್‍ನಲ್ಲಿ ರೈತರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಶಾಂತರಾಜ್ ಕಲ್ಲಗಂಗೂರು, ವೀರೇಶ್ ಕ್ಯಾತಿನಕೊಪ್ಪ, ಕುಪ್ಪ ಅಬ್ಬಲಗೆರೆ, ಮಂಜುನಾಥ್ ನವುಲೆ, ಆನಂದಯ್ಯ ಚಟ್ನಹಳ್ಳಿ, ಚಂದು ಶ್ರೀರಾಮಂಪುರ, ರಾಮಕೃಷ್ಣಪ್ಪ, ಯು.ಸಿ.ರವಿ ಸೇರಿದಂತೆ ಮೊದಲಾದವರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News