ಮೈಸೂರು: ಹಲವು ಯೋಜನೆಗಳಿಗೆ ಸಂಪುಟ ಸಭೆಯಲ್ಲಿ ಅನುಮೋದನೆ; ಸಚಿವ ಡಾ.ಎಚ್.ಸಿ.ಮಹದೇವಪ್ಪ
ಮೈಸೂರು,ಜ.3: ಮೈಸೂರಿನ 245 ವೀಳ್ಯೆದೆಲೆ ಬೆಳಗಾರರಿಗೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವೀಳ್ಯೆದೆಲೆ ಬೆಳೆಯುವ ಸಲುವಾಗಿ ತಲಾ 5 ಗುಂಟೆ ಜಮೀನಿನಂತೆ ಒಟ್ಟು 30 ಎಕರೆ 25 ಗುಂಟೆ ಜಮೀನು ಹಂಚಿಕೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಮೈಸೂರು ಜಿಲ್ಲೆಯ ಹಲವಾರು ಯೋಜನೆಗಳಿಗೆ ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಮೈಸೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಕಾಮಗಾರಿಗಳಿಗೆ ಪರಿಷ್ಕೃತ 20.60 ಕೋಟಿ ರೂ.ಗಳ ಅಂದಾಜು ವೆಚ್ಚಕ್ಕೆ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಟಿ. ನರಸೀಪುರ ತಾಲೂಕಿನ ಹೊಳೆಸಾಲು ಗ್ರಾಮದ ಸರ್ವೇ ಸಂಖ್ಯೆ 807 ಮತ್ತು 808ರ ಪಕ್ಕದಲ್ಲಿರುವ ಕಾವೇರಿ ನದಿ ಪಾತ್ರದ 3 ಎಕರೆ ಜಮೀನನ್ನು ಮೆ. ಕಾರ್ತಿಕ್ ಎನೆರ್ಜಿ ರಿಸೋರ್ಸಸ್ ಸಂಸ್ಥೆಗೆ ಕಿರು ವಿದ್ಯುತ್ ಯೋಜನೆಗಾಗಿ ಗುತ್ತಿಗೆ ಆಧಾರದ ಮೇಲೆ ನೀಡಲು ಸಚಿವ ಸಂಪುಟದಲ್ಲಿ ಸಮ್ಮತಿ ನೀಡಿದೆ ಎಂದು ತಿಳಿಸಿದ್ದಾರೆ. ಟಿ. ನರಸೀಪುರ ಪಟ್ಟಣಕ್ಕೆ ಕುಡಿಯುವ ನೀರಿನ ಯೋಜನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದ್ದಾರೆ.