×
Ad

ತುಮಕೂರು: ಬಿಜೆಪಿಯ ಜನಪರ ಶಕ್ತಿ ವೇದಿಕೆಯಿಂದ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ

Update: 2018-01-03 20:34 IST

ತುಮಕೂರು,ಜ.03: ಆಡಳಿತ ನಡೆಸುವವರು ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ಉದ್ದೇಶದಿಂದ ಬಿಜೆಪಿಯ ಕರ್ನಾಟಕ ಜನಪರ ಶಕ್ತಿ ವೇದಿಕೆ ಅಭಿಪ್ರಾಯ ಸಂಗ್ರಹದ ಆಂದೋಲನವನ್ನು ಹಮ್ಮಿಕೊಂಡಿದ್ದು, ಜನರು ಮುಕ್ತವಾಗಿ ತಮ್ಮ ಅನಿಸಿಕೆ, ಅಭಿಪ್ರಾಯ, ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತೆ ವೇದಿಕೆಯ ಸಂಚಾಲಕ ಹಾಗೂ ಶಾಸಕ  ಡಾ.ಆಶ್ವಥ ನಾರಾಯಣ ತಿಳಿಸಿದ್ದಾರೆ.

ನಗರದ ಶ್ರೀ ಸಿದ್ದಗಂಗಾ ಫಾರ್ಮಸಿ ಕಾಲೇಜಿನಲ್ಲಿ ಬಿಜೆಪಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಒಂದು ಸರಕಾರ ಜನಪರವಾಗಿ ಕೆಲಸ ಮಾಡಬೇಕಾದರೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಹಾಗೂ ವಿವಿಧ ಕ್ಷೇತ್ರ ಗಣ್ಯರ ಸಲಹೆ ಅಗತ್ಯ. ಈ ಹಿನ್ನೆಲೆಯಲ್ಲಿ ಬಿಜೆಪಿ ಕರ್ನಾಟಕ ಜನಪರ ಶಕ್ತಿ ವೇದಿಕೆ ರಚಿಸಿಕೊಂಡು ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿಯೂ ಜನಾಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇಲ್ಲಿಗೆ ಆಗಮಿಸಿರುವ ಜನರು ಮುಕ್ತವಾಗಿ ವೇದಿಕೆಗೆ ಬಂದ ತಮ್ಮ ಅನಿಸಿಕೆ ಹಂಚಿಕೊಳ್ಳಬಹುದು. ಇಲ್ಲವೇ ಪತ್ರದ ಮೂಲಕ, ಇ-ಮೇಲ್ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಪ್ರಾಯ, ಸರಕಾರದ ಮುಂದಿರುವ ಸವಾಲುಗಳು, ಅವುಗಳಿಗೆ ಪರಿಹಾರ ಕುರಿತು ಸಲಹೆ ನೀಡಬಹುದಾಗಿದೆ. ಇಲ್ಲಿ ಸಂಗ್ರಹವಾಗುವ ಸಲಹೆಗಳನ್ನು ಕ್ರೋಢೀಕರಿಸಿ, ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವ ಗುರಿಯನ್ನು ಬಿಜೆಪಿ ಪಕ್ಷ ಹೊಂದಿದೆ ಎಂದು ಡಾ.ಆಶ್ವಥ ನಾರಾಯಣ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ.ಜೋತಿಗಣೇಶ್,ನಗರ ಮಂಡಲ ಅಧ್ಯಕ್ಷ ರಮೇಶ್,ಗ್ರಾಮಾಂತರ ಶಾಸಕ ಬಿ.ಸುರೇಶಗೌಡ,ಶಿವಪ್ರಸಾದ್,ಸುರೇಂದ್ರಷಾ,ಡಾ.ಎಂ.ಆರ್.ಹುಲಿನಾಯ್ಕರ್,ಶಂಭು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News