ಮುಖ್ಯಮಂತ್ರಿಗಳ ಕಾರ್ಯಕ್ರಮದ ಪೂರ್ವಸಿದ್ಧತೆ ಜಿಲ್ಲಾಧಿಕಾರಿಗಳಿಂದ ವೀಕ್ಷಣೆ
ಕಡೂರು, ಜ.3: ಕಡೂರು ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮಕ್ಕೆ ಜ.5ರಂದು ಕರ್ನಾಟಕ ನವನಿರ್ಮಾಣ ಎಂಬ ಕಲ್ಪನೆಯ ಮೇಲೆ ಕಡೂರು ಪಟ್ಟಣಕ್ಕೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಕಾರ್ಯಕ್ರಮಕ್ಕೆ ಈಗಾಗಲೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಬೃಹತ್ ಪೆಂಡಾಲ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಪೂರ್ವಸಿದ್ಧತೆಯನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಾದ ಎಂ.ಕೆ. ಶ್ರೀರಂಗಯ್ಯ ವೀಕ್ಷಣೆ ಮಾಡಿದರು.
ನಂತರ ಮಾಧ್ಯಮದವರೊಂದಿಗೆ ಜಿಲ್ಲಾಧಿಕಾರಿಗಳಾದ ಎಂ.ಕೆ. ಶ್ರೀರಂಗಯ್ಯ ಮಾತನಾಡಿ, ಇದು ಪೂರ್ಣ ಪ್ರಮಾಣದ ಸರ್ಕಾರಿ ಕಾರ್ಯಕ್ರಮವಾಗಿದ್ದು, ವೇದಿಕೆಯಲ್ಲಿ ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿರುವ ಜನಪ್ರತಿನಿಧಿಗೆ ಮತ್ತು ಅಧಿಕಾರಿಗಳಿಗೆ ಮಾತ್ರ ಅವಕಾಶವಿದ್ದು, ಬೇರೆ ಯಾವುದೇ ಮುಖಂಡರುಗಳಿಗೆ ವೇದಿಕೆಯಲ್ಲಿ ಅವಕಾಶವಿರುವುದಿಲ್ಲ. ಪುರಸಭೆಯವರಿಂದ ಪೌರ ಸನ್ಮಾನಕ್ಕೆ ಮಾತ್ರ ಅವಕಾಶ ಇರಲಿದೆ. ಎಲ್ಲಾ ಇಲಾಖೆಯ ವತಿಯಿಂದ ನೀಡಲಾಗುವ ಯೋಜನೆಯ ಫಲಾನುಭವಿಗಳಿಗೂ ವೇದಿಕೆಯ ಪಕ್ಕದಲ್ಲಿ ಅವಕಾಶವಿರಲಿದೆ ಎಂದು ಹೇಳಿದರು.
ಪೊಲೀಸ್ ತರಬೇತಿ ಕೇಂದ್ರಕ್ಕೆ ಮುಖ್ಯಮಂತ್ರಿಗಳು ಮಧ್ಯಾಹ್ನ ಆಗಮಿಸಲಿದ್ದು, ಪೊಲೀಸ್ ತರಬೇತಿ ಕೇಂದ್ರಕ್ಕೆ ಮುಖ್ಯಮಂತ್ರಿಗಳು ಹೆಲಿಕ್ಯಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಅಲ್ಲಿ ಮನವಿ ಸಲ್ಲಿಸುವವರಿಗೆ, ಹಾರ ಹಾಕುವವರಿಗೆ ಅವಕಾಶ ಕಲ್ಪಿಸಲಾಗುವುದು. ಎಸ್ಪಿ ಕೆ. ಅಣ್ಣಾಮಲೈ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಇರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತರೀಕೆರೆ ಉಪವಿಭಾಗಾಧಿಕಾರಿ ಸರೋಜಮ್ಮ, ತಹಸೀಲ್ದಾರ್ ಶ್ರೀಮತಿ ಭಾಗ್ಯ, ಸರ್ಕಲ್ ಇನ್ಸ್‍ಪೆಕ್ಟರ್ ಸತ್ಯನಾರಾಯಣ, ಠಾಣಾಧಿಕಾರಿ ರಾಕೇಶ್, ಜಿಪಂ ಮಹೇಶ್ ಒಡೆಯರ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.