×
Ad

ಗುಂಡ್ಲುಪೇಟೆ: ಎಚ್.ಎಸ್.ಮಹದೇವ ಪ್ರಸಾದ್ ಪುಣ್ಯ ಸ್ಮರಣೆ; ಕಣ್ಣೀರಿಟ್ಟ ಅಭಿಮಾನಿಗಳು

Update: 2018-01-03 22:56 IST

ಗುಂಡ್ಲುಪೇಟೆ,ಜ.3: ಮಾಜಿ ಸಚಿವ ದಿವಂಗತ ಎಚ್.ಎಸ್.ಮಹದೇವ ಪ್ರಸಾದ್ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ತಾಲ್ಲೂಕಿನ ಹಾಲಹಳ್ಳಿಯಲ್ಲಿ ವೀರಶೈವ ಧಾರ್ಮಿಕ ವಿಧಿ-ವಿಧಾನಗಳ ಅನುಸಾರವಾಗಿ ನಡೆಯಿತು.

ಹಾಲಹಳ್ಳಿಯ ತೆಂಗಿನ ತೋಟದಲ್ಲಿ  ಇರುವ ಮಹದೇವ ಪ್ರಸಾದ ಅವರ ಸಮಾಧಿ ಸ್ಮಾರಕವನ್ನು ವಿವಿಧ ಪುಷ್ಪಗಳಿಂದ ಅಲಂಕೃತಗೊಳಿಸಲಾಗಿತ್ತು. ಸುತ್ತಲು ನಾಲ್ಕು ಕಂಬಗಳನ್ನು ನಿಲ್ಲಿಸಿ ಮಂಟಪ ನಿರ್ಮಾಣ ಮಾಡಲಾಗಿತ್ತು.

ಮಹದೇವ ಪ್ರಸಾದ್ ಅವರ ಪತ್ನಿ, ಹಾಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ. ಗೀತಾ ಮಹದೇವ ಪ್ರಸಾದ್, ಪುತ್ರ ಗಣೇಶ್ ಪ್ರಸಾದ್, ಸೊಸೆ, ಮೊಮ್ಮಗು ಸೇರಿದಂತೆ ಕುಟುಂಬದ ಇತರೆ ಸದಸ್ಯರು ಸಮಾಧಿ ಸ್ಥಳದಲ್ಲಿ ಶಿವಲಿಂಗಕ್ಕೆ ಹಾಲಿನ ಅಭಿಷೇಕದಿಂದ ಪೂಜೆ ಸಲ್ಲಿಸಿದರು. ಪಡಗೂರು ಮಠದ ಶಿವಲಿಂಗೇಂದ್ರ ಸ್ವಾಮೀಜಿ ಅವರು ಮಹದೇವ ಪ್ರಸಾದ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಅಲ್ಲಿ ನೆರೆದಿದ್ದ ಸಹಸ್ರಾರು ಅಭಿಮಾನಿಗಳು ಮತ್ತು ಗೀತಾ ಮಹದೇವ ಪ್ರಸಾದ್ ಕಣ್ಣೀರಿಟ್ಟರು. ಕ್ಷಣ ಕಾಲ ಇಡಿ ವಾತಾವರಣ ಭಾವುಕತೆಯಿಂದ ತುಂಬಿ ತುಳುಕಿತ್ತು. ಮಾದಪಟ್ಟಣದ ವಿರಕ್ತ ಮಠದ ಸದಾಶಿವ ಸ್ವಾಮೀಜಿ ಅವರು ಪೂಜಾ ಕಾರ್ಯದ ನೇತೃತ್ವ ವಹಿಸಿದ್ದರು.

ಹಾಲಹಳ್ಳಿಯ ಸಮುದಾಯ ಭವನದಲ್ಲಿ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅವರ ಪಾದಪೂಜೆಯನ್ನು ಏರ್ಪಡಿಸಲಾಗಿತ್ತು. ಅತಿಥಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.

ಸ್ಮರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ, ಕಾಡಾ ಅಧ್ಯಕ್ಷ ಎಚ್.ಎಸ್.ನಂಜಪ್ಪ, ತಾಪಂ ಅಧ್ಯಕ್ಷ ಎಚ್.ಎನ್.ನಟೇಶ್ ಸೇರಿದಂತೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳು, ಅಭಿಮಾನಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News