ಬಣಕಲ್: ಕೊಟ್ಟಿಗೆಹಾರ ಕಳಸ ವೃತ್ತದಲ್ಲಿ ಅಪಘಾತಗಳಿಗೆ ಬ್ರೇಕ್ ಹಾಕಲು ಒತ್ತಾಯ

Update: 2018-01-03 17:55 GMT

ಬಣಕಲ್, ಜ.3: ಕೊಟ್ಟಿಗೆಹಾರದಿಂದ ಕಳಸಕ್ಕೆ ಸಾಗುವ ವೃತ್ತದಲ್ಲಿ ಹೊಸವರ್ಷದ ದಿನವೇ ಸರಣಿ ಅಪಘಾತಗಳು ನಡೆದಿದ್ದು ಅಮಾಯಕರು ಪ್ರಾಣ ಕಳೆದುಕೊಳ್ಳುವ ಆತಂಕ ವಾಹನ ಸವಾರರಲ್ಲಿ ಎದುರಾಗಿದೆ ಎಂದು ಕೊಟ್ಟಿಗೆಹಾರ ಗ್ರಾಮಸ್ಥರಾದ ಡಿ.ಎಸ್.ಸಂಜಯ್‍ಗೌಡ ತಿಳಿಸಿದ್ದಾರೆ.

ಅವರು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಬಾಳೂರು ಮಾರ್ಗವಾಗಿ ಕೊಟ್ಟಿಗೆಹಾರದ ವೃತ್ತಕ್ಕೆ ಸಂಪರ್ಕಿಸುವ ಇಳಿಜಾರು ರಸ್ತೆಯು ರಾಷ್ಟ್ರೀಯ ಹೆದ್ದಾರಿ 234 ರ ಕಡೂರು-ಮಂಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವುದರಿಂದ ಧರ್ಮಸ್ಥಳ ಹಾಗೂ ಚಿಕ್ಕಮಗಳೂರು ಕಡೆಯಿಂದ ಮತ್ತು ಹೊರನಾಡು ಕಡೆಯಿಂದ ಬರುವ ರಸ್ತೆಯಲ್ಲಿ ಹೊಸವರ್ಷದ ಎರಡು ದಿನಗಳಲ್ಲಿ ಸರಣಿ ಅಪಘಾತಗಳು ಸಂಭವಿಸಿದ್ದು ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಅಡ್ಡ ರಸ್ತೆಯಾಗಿರುವ ಕಳಸ ವೃತ್ತಕ್ಕೆ 100 ಮೀ ಅಂತರದಲ್ಲಿ ಹಂಪ್ ನಿರ್ಮಾಣ ಮಾಡಿದರೆ ಅಪಘಾತಗಳು ಕಡಿಮೆಯಾಗುತ್ತವೆ. ರಾಷ್ಟ್ರೀಯ ಹೆದ್ದಾರಿಯ ಕೊಟ್ಟಿಗೆಹಾರ ವೃತ್ತದ ಸಮೀಪ ಅಪಘಾತಗಳು ನಡೆಯದಂತೆ ವಾಹನ ಸವಾರರಿಗೆ ಎಚ್ಚರಿಕೆಯ ಪೋಲಿಸ್ ಬ್ಯಾರಿಕೇಡ್ ಹಾಕಿ ವೇಗ ನಿಯಂತ್ರಣಗೊಳಿಸಿ

ಕೊಟ್ಟಿಗೆಹಾರ ಪ್ರವಾಸಿ ತಾಣವಾಗಿರುವುದರಿಂದ ಕೊಟ್ಟಿಗೆಹಾರ ವೃತ್ತ ಯಾವಾಗಲು ವಾಹನ ದಟ್ಟಣೆಯಿಂದ ತುಂಬಿ ತುಳುಕುತ್ತಿದ್ದು, ಕಳಸದಿಂದ ಬರುವ ವಾಹನಗಳು ಅತಿ ವೇಗವಾಗಿ ಇಳಿಜಾರು ರಸ್ತೆಯಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ಢಿಕ್ಕಿಯಾಗುತ್ತಿವೆ. 

ಹಾಗಾಗಿ ವಾಹನ ಸವಾರರು ವೇಗವಾಗಿ ಬಂದು ಅಪಘಾತ ಸಂಭವಿಸುತ್ತಿರುವುದರಿಂದ ರಾಜ್ಯ ಹೆದ್ದಾರಿಯ ಕೊಟ್ಟಿಗೆಹಾರ ಕಳಸ ರಸ್ತೆಗೆ ನೂರು ಮೀ ಅಂತರದಲ್ಲಿ ಹಂಪ್ ಮತ್ತು ಸೂಚನಾಫಲಕ ಹಾಗೂ ಹಂಪ್‍ಗೆ ರಿಪ್ಲೆಕ್ಟರ್‍ಗಳನ್ನು ಅಳವಡಿಸಬೇಕು. ಹಗಲು ರಾತ್ರಿ ಸಂಚರಿಸುವ ಎಲ್ಲಾ  ವಾಹನಗಳಿಗೂ ಅನುಕೂಲವಾಗುವಂತೆ ಅಪಘಾತದ ತಾಣವಾಗಿರುವ  ಕೊಟ್ಟಿಗೆಹಾರ ವೃತ್ತವನ್ನು, ಲೋಕೋಪಯೋಗಿ ಅಧಿಕಾರಿಗಳು ಅಥವಾ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಕೊಟ್ಟಿಗೆಹಾರ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News