ಮಹಿಳಾ ಕಮಾಂಡರ್ ಮೇಲೆ ಹಲ್ಲೆ: ಪೈಲಟ್ ಲೈಸನ್ಸ್ ಅಮಾನತು

Update: 2018-01-04 04:32 GMT

ಹೊಸದಿಲ್ಲಿ, ಜ.4: ಲಂಡನ್‌ನಿಂದ ಮುಂಬೈಗೆ ಬರುತ್ತಿದ್ದ ವಿಮಾನದಲ್ಲಿ ಮಹಿಳಾ ಕಮಾಂಡರ್‌ಗೆ ಹೊಡೆದ ಆರೋಪದ ಹಿನ್ನೆಲೆಯಲ್ಲಿ ಜೆಟ್ ಏರ್‌ವೇಸ್‌ನ ಹಿರಿಯ ಪೈಲಟ್‌ನ ವಿಮಾನಯಾನ ಲೈಸನ್ಸ್ ಅಮಾನತುಗೊಳಿಸಿ ನಾಗರಿಕ ವಿಮಾನಯಾನ ನಿರ್ದೇಶನಾಲಯ ಆದೇಶ ಹೊರಡಿಸಿದೆ.

ಪ್ರಕರಣದ ತನಿಖೆ ನಡೆಯಲಿದ್ದು, ತಕ್ಷಣಕ್ಕೆ ಹಾರಾಟದ ಲೈಸನ್ಸ್ ಅಮಾನತುಗೊಳಿಸಲಾಗಿದೆ ಎಂದು ಡಿಜಿಸಿಎ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜನವರಿ 1ರಂದು ನಡೆದ ಘಟನೆಯ ಬಳಿಕ ಹಿರಿಯ ಪೈಲಟ್‌ನನ್ನು ವಿಮಾನ ಚಾಲನೆಯಿಂದ ಹೊರಗಿಡಲಾಗಿದೆ.

ವಿಮಾನದ ಮಹಿಳಾ ಕಮಾಂಡರ್‌ಗೆ ದೈಹಿಕವಾಗಿ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ, ಎರಡು ಬಾರಿ ಕಾಕ್‌ಪಿಟ್ ನಿರ್ವಹಿಸಿಲ್ಲ. ಇದು ಸುರಕ್ಷಾ ನಿಯಮಾವಳಿಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದು ಕೂಡಾ ಲೈಸನ್ಸ್ ಅಮಾನತುಗೊಳಿಸಲು ಮುಖ್ಯ ಕಾರಣ ಎಂದು ಅಧಿಕಾರಿ ವಿವರಿಸಿದ್ದಾರೆ. ಈ ಘಟನೆ ಇರಾನ್-ಪಾಕಿಸ್ತಾನ ವಾಯುಪ್ರದೇಶದಲ್ಲಿ ಜನವರಿ 1ರಂದು ಮುಂಜಾನೆ 2:45ರ ವೇಳೆಯಲ್ಲಿ ನಡೆದಿದೆ ಎಂದು ಮೂಲಗಳು ಹೇಳಿವೆ.

ಕಾಕ್‌ಪಿಟ್ ಸಿಬ್ಬಂದಿಯ ನಡುವಿನ ಅಪನಂಬಿಕೆಯಿಂದ ಈ ಘಟನೆ ಸಂಭವಿಸಿದ್ದು, ಇದನ್ನು ತಕ್ಷಣ ಹಾಗೂ ಸ್ನೇಹಪರವಾಗಿ ಬಗೆಹರಿಸಲಾಗಿದೆ ಎಂದು ಜೆಟ್ ಏರ್‌ವೇಸ್ ಹೇಳಿಕೊಂಡಿದೆ. "ಲಂಡನ್- ಮುಂಬೈ ವಿಮಾನ (9ಡಬ್ಲ್ಯು119)ದಲ್ಲಿ ಈ ಸಮಸ್ಯೆ ಉದ್ಭವಿಸಿದೆ. ಎರಡು ಹಸುಳೆಗಳೂ ಸೇರಿದಂತೆ 324 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಸುರಕ್ಷಿತವಾಗಿ ಮುಂಬೈ ತಲುಪಿದೆ" ಎಂದು ವಕ್ತಾರರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಪುರುಷ ಪೈಲಟ್ ಮಹಿಳಾ ಕಮಾಂಡರ್ ಜತೆ ವಾಗ್ವಾದ ನಡೆಸಿದ್ದರು ಎಂದು ಜೆಟ್ ಏರ್‌ವೇಸ್ ಒಪ್ಪಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News