ಬಿ.ಜೆ.ಪಿ. ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ: ರೋಷನ್ ಬೇಗ್
ಕಡೂರು, ಜ.4: ಬಿಜೆಪಿಯವರು ನಡೆಸುತ್ತಿರುವ ಪರಿವರ್ತನಾ ಯಾತ್ರೆಯು ಎಲ್ಲಿಯೂ ಯಶಸ್ವಿಯಾಗಿಲ್ಲ. ಬಿ.ಜೆ.ಪಿ. ಪಕ್ಷದಲ್ಲಿ ಒಳಜಗಳಗಳು ಹೆಚ್ಚಾಗಿವೆ. ಬಿ.ಜೆ.ಪಿಯವರು ಅಧಿಕಾರಕ್ಕೆ ಬರುವ ಬಗ್ಗೆ ಕನಸು ಕಾಣುತ್ತಿದ್ದಾರೆಂದು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್ ತಿಳಿಸಿದರು.
ಅವರು ಕಡೂರು ಪಟ್ಟಣದ ಪ್ರವಾಸಿ ಮಂದಿರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮುಂದಿನ 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ಒಂದು ಕ್ಷೇತ್ರದಲ್ಲಿ ಹೆಚ್ಚು ಅಭ್ಯರ್ಥಿಗಳು ಟಿಕೆಟ್‍ಗಾಗಿ ಆಕಾಂಕ್ಷಿಗಳಿದ್ದಾರೆ ಎಂದರೆ ಪಕ್ಷ ಪ್ರಬಲವಾಗಿದೆ ಎಂದು ಅರ್ಥ ಎಂದು ತಿಳಿಸಿದರು.
ಯಾವುದೇ ಕ್ಷೇತ್ರದ ಅಭ್ಯರ್ಥಿಗಳ ಘೋಷಣೆಯನ್ನು ಪಕ್ಷದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಗಳು, ಪಕ್ಷದ ನಾಯಕರುಗಳ ಜೊತೆ ಚುನಾವಣಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅದರದ್ದೇ ಆದ ಕಮಿಟಿ ಇದೆ. ಇವರು ರಾಷ್ಟ್ರೀಯ ಕಾಂಗ್ರೆಸ್ ಮುಖಂಡರುಗಳ ಜೊತೆ ಚರ್ಚಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಿದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ಹೇಳಿದರು.
ನವಕರ್ನಾಟಕ ಕಲ್ಪನೆಯ ಸಾಧನಾ ಯಾತ್ರೆಯಲ್ಲಿ ಮುಖ್ಯಮಂತ್ರಿಗಳು ಪಕ್ಷಭೇದ ಮಾಡದೇ ಬೇರೆ ಪಕ್ಷದವರನ್ನು ಇಟ್ಟುಕೊಂಡು ಸಭೆಗಳನ್ನು ನಡೆಸುತ್ತಿದ್ದಾರೆ. ಇದು ಸಂಪೂರ್ಣವಾಗಿ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಕ್ರಮವಾಗಿದೆ ಎಂದರು.
ರಾಜ್ಯದ ಕೆಲವು ಕಡೆಗಳಲ್ಲಿ ಯುವಕರುಗಳ ಹತ್ಯೆ ನಡೆಯುತ್ತಿರುವುದು ಬೇಸರ ಮೂಡಿಸಿದೆ. ಕರಾವಳಿ ಪ್ರದೇಶದಲ್ಲಿ ಇದು ಹೆಚ್ಚಾಗಿದೆ. ಆ ಭಾಗದಲ್ಲಿ ಯುವಕರುಗಳು ಎಚ್ಚರಿಕೆಯಿಂದ ಇರಬೇಕಾದ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಜನಾಂಗದವರಿಗೆ ಅನ್ಯಾಯವಾಗಬಾರದು. ಪ್ರತಿಯೊಂದು ಜನಾಂಗದವರು ಒಂದಾಗಿ ಬಾಳಬೇಕಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್, ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್, ಎ.ಎನ್. ಮಹೇಶ್, ಕೆ.ಎಂ. ಕೆಂಪರಾಜು, ಮಹೇಶ್ ಒಡೆಯರ್, ಶರತ್ ಕೃಷ್ಣಮೂರ್ತಿ, ವನಮಾಲ ದೇವರಾಜ್, ಲೋಲಾಕ್ಷಿಬಾಯಿ, ರೇಣುಕಾ ಉಮೇಶ್, ಎಂ.ಹೆಚ್. ಚಂದ್ರಪ್ಪ, ಕೆ.ಎಂ. ವಿನಾಯಕ್, ಕೆ.ಎಸ್. ಆನಂದ್, ಕೆ.ಹೆಚ್. ರಂಗನಾಥ್ ಉಪಸ್ಥಿತರಿದ್ದರು.