×
Ad

ಪ್ರೊ.ಭಗವಾನ್, ಪ್ರೊ. ಅರವಿಂದ ಮಾಲಗತ್ತಿಗೆ ಜಾಮೀನು ಮಂಜೂರು

Update: 2018-01-04 20:13 IST

ಮೈಸೂರು, ಜ.4: ಭಗವದ್ಗೀತೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ನ್ಯಾಯಾಲಯಕ್ಕೆ ಹಾಜರಾದ ಪ್ರೊ. ಅರವಿಂದ ಮಾಲಗತ್ತಿ ಹಾಗೂ ಪ್ರೊ. ಕೆ.ಎಸ್ ಭಗವಾನ್ ಅವರಿಗೆ ಇಲ್ಲಿನ 4ನೇ ಜೆ.ಎಂ.ಎಫ್.ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಮುಂದಿನ ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ಕೋರ್ಟ್ ಸೂಚನೆ ನೀಡಿದೆ.

ಈ ವೇಳೆ ಈಗಾಗಲೇ ಜಾಮೀನು  ಪಡೆದಿರುವ ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ. ಮಹೇಶ್ ಚಂದ್ರ ಗುರು ಸಹ ವಿಚಾರಣೆಗೆ ಹಾಜರಿದ್ದರು.

ಜಾಮೀನು ಅರ್ಜಿ ಶರತ್ತು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಮುಂದಿನ ವಿಚಾರಣೆಗೆ ಹಾಜರಾಗಲು ಈ ಮೂವರಿಗೂ ಸೂಚಿಸಿತ್ತು. ಈ ಪೈಕಿ ಪ್ರೊ.ಮಹೇಶ್ ಚಂದ್ರ ಗುರು ಅವರು ಈ ಹಿಂದೆಯೇ ಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ನ್ಯಾಯಾಲಯ ಅವರನ್ನು ಜೈಲಿಗೆ ಕಳುಹಿಸಿತ್ತು. ಕೆಲ ದಿನಗಳ ಜೈಲು ಶಿಕ್ಷೆ ಬಳಿಕ ಜಾಮೀನು ಪಡೆದು ಹೊರ ಬಂದಿದ್ದರು.

ಉಳಿದ ಇಬ್ಬರು  ಮಾತ್ರ ಕೋರ್ಟ್ ಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ  ಪ್ರೊ.ಭಗವಾನ್  ಹಾಗೂ ಪ್ರೊ.ಅರವಿಂದ ಮಾಲಗತ್ತಿ ವಿರುದ್ಧ ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿತ್ತು.

ವಾದ ವಿವಾದ ಆಲಿಸಿದ ನಂತರ ಜಾಮೀನು ಆದೇಶವನ್ನು ನ್ಯಾಯಾಧೀಶರು ಸಂಜೆಗೆ ಕಾಯ್ದಿರಿಸಿದ್ದರು. ಸಂಜೆ ನೀಡಿದ ಆದೇಶದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ ಕೋರ್ಟ್, ಮುಂದಿನ ವಿಚಾರಣೆಗೆ ಕಡ್ಡಾಯ ಹಾಜರಿರುವಂತೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News