×
Ad

ನಾಲ್ಕು ವರ್ಷ ಕಳೆದರೂ ಬಾರದ ಅಚ್ಛೇ ದಿನ್: ಕೆ.ಸಿ.ವೇಣುಗೋಪಾಲ್

Update: 2018-01-04 20:30 IST

ತುರುವೇಕೆರೆ,ಜ.04: ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ವಂಚನೆ ಮಾಡಿದ್ದು, ನಾಲ್ಕು ವರ್ಷ ಕಳೆದರೂ ಅಚ್ಛೇ ದಿನ್ ಈ ದೇಶದ ಜನರಿಗೆ ಬರಲೇ ಇಲ್ಲ' ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

ತುರುವೇಕೆರೆಯಲ್ಲಿ ಗುರುವಾರ ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡುತಿದ್ದ ಅವರು, ದೇಶದಲ್ಲಿನ ರೈತರು ಮತ್ತು ಬಡವರು ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಇದು ಕಾಣುತ್ತಿಲ್ಲ. ಯುಪಿಎ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. 72 ಸಾವಿರ ಕೋಟಿ ಮೊತ್ತದ ರೈತರ ಸಾಲ ಮನ್ನಾ ಮಾಡಿದ್ದರು. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 8,600 ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ, ಮೋದಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲೇಬಾರದು ಎಂಬ ಉದ್ದೇಶದಿಂದ ಜೆಡಿಎಸ್‍ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‍ಗೆ ನೀವು ಮತ ಹಾಕಿದರೆ ಅದು ಕೋಮುವಾದಿ ಬಿಜೆಪಿಗೆ ಮತ ಹಾಕಿದಂತಾಗುತ್ತದೆ. ಇಂತಹ ತಪ್ಪು ಮಾಡಬಾರದು' ಎಂದು ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್, ಸಚಿವ ಟಿ.ಬಿ.ಜಯಚಂದ್ರ, ಸಂಸದ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಕೆ.ಎನ್.ರಾಜಣ್ಣ ಸೇರಿ ಅನೇಕರು ಈ ಜಿಲ್ಲೆಯಲ್ಲಿದ್ದರೂ ಕಳೆದ ಬಾರಿ ಕೇವಲ 4 ವಿಧಾನ ಸಭಾ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿತು. ಆದರೆ, ಈ ಬಾರಿ ತುರುವೇಕೆರೆ ವಿಧಾನ ಸಭಾ ಕ್ಷೇತ್ರ ಸೇರಿದಂತೆ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೇ ಗೆಲ್ಲಬೇಕು' ಎಂದು ಸೂಚಿಸಿದರು.

ಗುಜರಾತ್ ಚುನಾವಣೆಯಲ್ಲಿ ನರೇಂದ್ರ ಮೋದಿ ಪ್ರಭಾವ, ಅಲ್ಲಿನ ಸರಕಾರದ ಅಧಿಕಾರ ಬಲ, ಹಣ ಬಲ, ತೋಳ್ಬಲದ ಮುಂದೆ ರಾಹುಲ್ ಗಾಂಧಿಯವರು ಏಕಾಂಗಿ ಹೋರಾಟ ನಡೆಸಿದರು. ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲು ಶ್ರಮಿಸಿ ಕಾಂಗ್ರೆಸ್ ಶಕ್ತಿ ಏನು ಎಂಬುದನ್ನು ತೋರಿಸಿದ್ದಾರೆ ಎಂದು ಹೇಳಿದರು.

ಕೆ.ಪಿ.ಸಿ.ಸಿ.ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ರಣ ತಂತ್ರ ಕರ್ನಾಟಕದಲ್ಲಿ ನಡೆಯಲ್ಲ. ಕಾಂಗ್ರೆಸ್ ಪಕ್ಷವೇ ಮತ್ತೆ ಅಧಿಕಾರ ಗಳಿಸಲಿದೆ. ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಬಿಜೆಪಿಯವರಿಗೆ ರೈತರ, ಬಡವರ ಹಿತ ಬೇಕಾಗಿಲ್ಲ. ಕೋಮುಗಲಭೆ ಮಾತ್ರ ಬೇಕು. ಅದೇ ರೀತಿ ಜೆಡಿಎಸ್ ಪಕ್ಷದವರದ್ದೂ ಇದೇ ಧೋರಣೆಯಾಗಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಎತ್ತಿನ ಹೊಳೆ ಯೋಜನೆ,ಅನ್ನಭಾಗ್ಯ ಯೋಜನೆ ರದ್ದುಪಡಿಸುತ್ತೇನೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಇಂತಹ ಜನವಿರೋಧಿ ನಿಲುವಿನವರಿಗೆ ಅಧಿಕಾರ ಕೊಡಬೇಕೆ ಎಂಬುದನ್ನು ಜನರು ಗಂಭೀರವಾಗಿ ಚಿಂತನೆ ಮಾಡಬೇಕು' ಎಂದು ಹೇಳಿದರು.

ತುರುವೇಕೆರೆ ಕ್ಷೇತ್ರಕ್ಕೆ ಕೆ.ಮಂಜು,ರಂಗಪ್ಪ ಚೌದ್ರಿ,ಲಕ್ಷ್ಮಿನಾರಾಯಣ, ಗೀತಾ ರಾಜಣ್ಣ ಹೀಗೆ 6ಕ್ಕೂ ಹೆಚ್ಚು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಕೆಲ ಆಕಾಂಕ್ಷಿಗಳ ಹೆಸರು ಬಿಟ್ಟು ಹೋಗಿರಬಹುದು. ಅಂತಹವರು ಸಾರ್ವಜನಿಕವಾಗಿ ನಾನೂ ಒಬ್ಬ ಆಕಾಂಕ್ಷಿ ಎಂದು ಹೇಳಿಕೊಳ್ಳಬಹುದು ಎಂದು ಪರಮೇಶ್ವರ್ ಹೇಳಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ,ನಮ್ಮ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಟಿವಿಯವರು ತೋರಿಸದೇ ಇದ್ದರೂ ಚಿಂತೆ ಇಲ್ಲ. ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ನಡೆದ ಅನಾಚಾರ, ದುರಾಡಳಿತ ತೋರಿಸಬೇಕು. ಜೈಲಿಗೆ ಹೋಗಿ ಬಂದವರ ದೃಶ್ಯಗಳನ್ನು ಧಾರಾವಾಹಿ ಮಾಡಿ ತೋರಿಸಿದರೆ ಅವರ ಪಾದಕ್ಕೆ ದೊಡ್ಡ ನಮಸ್ಕಾರ ಮಾಡುತ್ತೇನೆ ಎಂದರು.

ವೇದಿಕೆಯಲ್ಲಿ ಕೆ.ಎನ್.ರಾಜಣ್ಣ, ಡಾ.ರಫೀಕ್ ಅಹಮದ್, ರಾಣಿ ಸತೀಶ್ ಸೇರಿದಂತೆ ಹಿರಿಯ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News