×
Ad

ಕೇರಳದ ಆಶ್ರಮದಲ್ಲಿ ಮಡಿಕೇರಿಯ ಬಾಲಕಿಯರು ಬಂಧಿ : ನೊಂದ ತಾಯಿಯಿಂದ ಪೊಲೀಸರಿಗೆ ದೂರು

Update: 2018-01-04 21:41 IST

"ಮಕ್ಕಳ ಬಗ್ಗೆ ವಿಚಾರಿಸಿದರೆ ಅವಾಚ್ಯವಾಗಿ ನಿಂದಿಸುತ್ತಾರೆ"

ಮಡಿಕೇರಿ, ಜ.4: ನನ್ನ ಮೂರು ಹೆಣ್ಣು ಮಕ್ಕಳನ್ನು ಕೇರಳದ ಕಣ್ಣೂರು ಜಿಲ್ಲೆಯ ತೊಟ್ಟಡ ಅಮ್ಮು ಪರಂಬುವಿನ ಅಪೂರ್ವಾಶ್ರಮಕ್ಕೆ ಸೇರಿಸಿ ಏಳು ವರ್ಷ ಕಳೆದಿದೆ. ಆದರೆ ನಮ್ಮ ಗಮನಕ್ಕೆ ತಾರದೆ ಮೊದಲ ಮಗಳಾದ ಪವಿತ್ರ ಎಂಬವಳನ್ನು ಆಶ್ರಮದ ಮಂದಿ ವಿವಾಹ ಮಾಡಿದ್ದಾರೆ. ಅಲ್ಲದೆ 15 ಮತ್ತು 13 ವರ್ಷ ಪ್ರಾಯದ ನನ್ನ ಇಬ್ಬರು ಹೆಣ್ಣು ಮಕ್ಕಳನ್ನು ಬಲವಂತವಾಗಿ ಆಶ್ರಮದಲ್ಲೇ ಇರಿಸಿಕೊಂಡಿದ್ದು, ಯಾವುದೇ ಸಂಪರ್ಕವಿಲ್ಲದಂತೆ ಮಾಡಲಾಗಿದೆ ಎಂದು ಮೂರ್ನಾಡು ಸಮೀಪದ ಬಲಮುರಿ ಗ್ರಾಮದ ನಿವಾಸಿ ಪಣಿಯರವರ ಮಂಜುಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ನಾನು ಆಶ್ರಮಕ್ಕೆ ತೆರಳಿದರೂ ನನ್ನ ಮಕ್ಕಳನ್ನು ನೋಡಲು, ಮಾತನಾಡಿಸಲು ಬಿಡುತ್ತಿಲ್ಲ. ನಾನು ಮಕ್ಕಳನ್ನು ನೋಡಲೆಂದು ಇಲ್ಲಿಯವರೆಗೆ ಮೂರು ಬಾರಿ ಆಶ್ರಮಕ್ಕೆ ಹೋಗಿದ್ದು, ಒಂದು ಬಾರಿಯೂ ಆಶ್ರಮ ಪ್ರವೇಶಿಸಲು ಅವಕಾಶ ನೀಡಿಲ್ಲ. ನನ್ನ ಇಬ್ಬರು ಹೆಣ್ಣು ಮಕ್ಕಳು ಕಷ್ಟ ಅನುಭವಿಸುತ್ತಿರುವ ಬಗ್ಗೆ ವಿವಾಹವಾಗಿ ಹೋದ ದೊಡ್ಡ ಮಗಳು ಪವಿತ್ರ ತಿಳಿಸಿದ್ದು, ನಾನು ಆತಂಕದಲ್ಲಿದ್ದೇನೆ ಎಂದು ಮಂಜುಳಾ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಇಬ್ಬರು ಹೆಣ್ಣು ಮಕ್ಕಳು ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿಯೇ ಇಲ್ಲದಾಗಿದೆ. ಮಕ್ಕಳ ಬಗ್ಗೆ ವಿಚಾರಿಸಿದರೆ ಆಶ್ರಮದ ಮಂದಿ ಸೂಕ್ತ ಉತ್ತರ ನೀಡದೆ ನಿರ್ಲಕ್ಷಿಸುತ್ತಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದ ಬಳಸಿ ನಿಂದಿಸುತ್ತಾರೆ. ಇದರಿಂದ ನನಗೆ ತುಂಬಾ ನೋವಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿದ ವಿಧವೆ ಮಹಿಳೆಯಾದ ನನಗೆ ನ್ಯಾಯ ದೊರಕಿಸಿ ಕೊಡಬೇಕು ಮತ್ತು ನನ್ನ ಇಬ್ಬರು ಹೆಣ್ಣು ಮಕ್ಕಳನ್ನು ಆಶ್ರಮದ ಬಂಧನದಿಂದ ಬಿಡುಗಡೆಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ತಪ್ಪೆಸಗಿದ ಆಶ್ರಮದ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಮಕ್ಕಳ ಕಲ್ಯಾಣ ಸಮಿತಿಗೆ ಮಂಜುಳ ಮನವಿ ಮಾಡಿಕೊಂಡಿದ್ದಾರೆ. ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಕೊಡಗು ಜಿಲ್ಲಾ ಸಂಘಟನಾ ಸಮಿತಿ ಈ ಪ್ರಕರಣದ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸುವ ಮೂಲಕ ಜಿಲ್ಲಾಡಳಿತ ಅಸಹಾಯಕ ಮಹಿಳೆ ಮಂಜುಳಾಳಿಗೆ ನ್ಯಾಯ ಒದಗಿಸಿಕೊಡಬೇಕೆಂದು ಸಮಿತಿಯ ಸಂಚಾಲಕರಾದ ವೈ.ಕೆ.ಗಣೇಶ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News