ರಾಘವೇಶ್ವರ ಶ್ರೀ ವಿರುದ್ಧದ ಅತ್ಯಾಚಾರ ಪ್ರಕರಣ : ಸ್ವಾಮೀಜಿಗೆ ನೋಟಿಸ್ ಜಾರಿಗೆ ಸುಪ್ರೀಂ ಆದೇಶ

Update: 2018-01-04 17:01 GMT

ಬೆಂಗಳೂರು, ಜ.4: ಅಪ್ರಾಪ್ತೆಯ ಮೇಲಿನ ಅತ್ಯಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಸಿಐಡಿ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ನಿರ್ದೇಶಿಸಬೇಕು ಎಂದು ಕೋರಿರುವ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ರಾಘವೇಶ್ವರ ಭಾರತೀ ಸ್ವಾಮೀಜಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ಸ್ವಾಮೀಜಿ ನನ್ನ ಮೇಲೆ ನಡೆಸಿರುವ ಅತ್ಯಾಚಾರ ದೂರಿನ ಬಗ್ಗೆ ಸಿಐಡಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ. ಹೀಗಾಗಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ನಿರ್ದೇಶಿಸಬೇಕು ಎಂದು ಕೋರಿ 26 ವರ್ಷದ ಸಂತ್ರಸ್ತೆ ಸಲ್ಲಿಸಿರುವ ಕ್ರಿಮಿನಲ್ ರಿಟ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಗಿರಿನಗರ ಪೊಲೀಸ್ ಠಾಣೆ ಅಧಿಕಾರಿ, ಸಿಐಡಿಯ ಡಿಐಜಿ ಮತ್ತು ಸಿಬಿಐಗೆ ನೋಟಿಸ್ ಜಾರಿಗೆ ನ್ಯಾಯಪೀಠ ನಿರ್ದೇಶಿಸಿದೆ.

ಸಂತ್ರಸ್ತೆಯ ಅಪಹರಣ ಮಾಡಿ ಜೀವಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿರುವ ಪ್ರತಿವಾದಿಗಳ ಪಟ್ಟಿಯಲ್ಲಿರುವ ಬೆಂಗಳೂರಿನ ವಕೀಲ ಎಂ.ಅರುಣ ಶ್ಯಾಮ್, ಸಿದ್ದಾಪುರ ತಾಲ್ಲೂಕಿನ ಕರಗೋಡು ಅನಂತಣ್ಣ, ಬೆಂಗಳೂರಿನ ರಮೇಶಣ್ಣ, ಹೊನ್ನಾವರ ತಾಲ್ಲೂಕಿನ ಬಡಗಣಿಯ ಬಿ.ಆರ್.ಸುಬ್ರಮಣ್ಯ, ಅಂಕೋಲಾ ತಾಲೂಕಿನ ಕುಮಟಗಣಿಯ ಮಧುಕರ ಮತ್ತು ಬೆಂಗಳೂರಿನ ಜಗದೀಶ್ ಶರ್ಮಾ, ಸಿ.ಜಗದೀಶ್‌ಗೂ ನೋಟಿಸ್ ಜಾರಿಗೆ ಆದೇಶಿಸಲಾಗಿದೆ.

ರಿಟ್ ಅರ್ಜಿಯ ಮುಖ್ಯಾಂಶಗಳು: ನನ್ನ ಮೇಲೆ ಸ್ವಾಮೀಜಿ ಅತ್ಯಾಚಾರ ನಡೆಸಿದ್ದಾರೆ ಎಂದು ನಾನು 2015ರ ಆಗಸ್ಟ್ 29ರಂದು ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೆ. ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದೆ. ಆದರೆ, ಇಲ್ಲೀತನಕ ಈ ಕುರಿತಂತೆ ಪೊಲೀಸರು ತನಿಖೆ ಮುಕ್ತಾಯಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ನಾನು ಅವರ ಶಾಲೆಯ ವಿದ್ಯಾರ್ಥಿಯಾಗಿದ್ದ ವೇಳೆ ಸ್ವಾಮೀಜಿ ನನ್ನನ್ನು ತಮ್ಮ ಕೋಣೆಗೆ ಕರೆಯಿಸಿಕೊಂಡು ನನ್ನ ಬಾಯಿಮುಚ್ಚಿ ಅತ್ಯಾಚಾರ ನಡೆಸಿರುತ್ತಾರೆ. ಆಗ ನನಗೆ ಕೇವಲ 15 ವರ್ಷವಾಗಿತ್ತು. ವಿಷಯವನ್ನು ಯಾರಿಗೂ ಹೇಳದಂತೆ ನನ್ನನ್ನು ಮತ್ತು ನನ್ನ ಪೋಷಕರನ್ನು ಬೆದರಿಸಲಾಗಿತ್ತು. ನನ್ನ ಇಚ್ಛೆಗೆ ವಿರುದ್ಧವಾಗಿ ಸ್ವಾಮೀಜಿಯೇ 2009ರ ಮೇ 29ರಂದು ನನ್ನ ಮದುವೆ ಮಾಡಿಸಿದರು. ಮದುವೆಯ ನಂತರ 2012ರ ಸೆಪ್ಟೆಂಬರ್ 13ರಂದು ಪ್ರತಿವಾದಿ ಆರೋಪಿಗಳು, ನನ್ನನ್ನು ಅಪಹರಿಸಿ ಮಠಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನನ್ನ ಮೇಲೆ ಬಲತ್ಕಾರ ನಡೆಸಲಾಯಿತು.ಕರ್ನಾಟಕದಲ್ಲಿ ಇವರ ವಿರುದ್ಧ ಪ್ರಶ್ನೆ ಮಾಡುವ ಧೈರ್ಯ ಯಾರಿಗೂ ಇಲ್ಲವೇನೊ ಎಂಬಂತಹ ವಾತಾವರಣ ಇದೆ. ಸಿಐಡಿ ಇಲ್ಲೀತನಕ ಸ್ವಾಮೀಜಿ ಹೇಳಿಕೆ ಪಡೆದಿಲ್ಲ. ಪ್ರಕರಣದ ತನಿಖಾಧಿಕಾರಿಗಳು ಬದಲಾಗುತ್ತಲೇ ಇದ್ದಾರೆ. ಸಿಐಡಿ ಮೇಲೆ ಅಪಾರವಾದ ರಾಜಕೀಯ ಒತ್ತಡವಿದೆ. ಈ ಪ್ರಕರಣದ ಆರೋಪಿಗಳು ಅಧೀನ ನ್ಯಾಯಾಲಯದಿಂದ ಈಗಾಗಲೇ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.

ಸ್ವಾಮೀಜಿ ವಿರುದ್ಧದ ಪ್ರಕರಣಗಳ ವಿಚಾರಣೆಯಿಂದ ಕರ್ನಾಟಕ ಹೈಕೋರ್ಟ್‌ನ ಎಂಟು ನ್ಯಾಯಮೂರ್ತಿಗಳು ಹಿಂದೆ ಸರಿದಿರುವುದು ಗಮನಾರ್ಹ. ರಾಮಕಥಾ ಗಾಯಕಿ ಮೇಲಿನ ಅತ್ಯಾಚಾರ ಆರೋಪದ ಮತ್ತೊಂದು ಪ್ರಕರಣದಲ್ಲಿ ಬೆಂಗಳೂರು ಸೆಷನ್ಸ್ ನ್ಯಾಯಾಲಯ ಸ್ವಾಮೀಜಿಯನ್ನು ಆರೋಪದಿಂದ ಕೈಬಿಟ್ಟಿದೆ.  ಸ್ವಾಮೀಜಿ ರಾಜ್ಯದ ಆಡಳಿತ ಯಂತ್ರದ ಮೇಲೆ ಪ್ರಭಾವ ಬೀರುವ ಶಕ್ತಿ ಹೊಂದಿದ್ದಾರೆ. ಹಾಗಾಗಿ ನಮ್ಮ ದೂರು ಅರಣ್ಯ ರೋದನ ಅನುಭವಿಸುತ್ತಿದೆ.ಈ ಎಲ್ಲಾ ಕಾರಣಗಳಿಂದ ಸಿಐಡಿ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲು ನಿರ್ದೇಶಿಸಬೇಕು. ಸಿಬಿಐ ತನಿಖೆಯನ್ನು ಶೀಘ್ರವೇ ಪೂರ್ಣಗೊಳಿಸಿ ಅಂತಿಮ ವರದಿಯನ್ನು ಸಕ್ಷಮ ನ್ಯಾಯಾಲಯ್ಕಕೆ ಒಪ್ಪಿಸಬೇಕು. ಇಲ್ಲವೇ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಿಐಡಿ ತನಿಖೆ ನಡೆಸಲು ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅರ್ಜಿದಾರರ ಪರ ಆರ್.ಬಸಂತ್, ರಾಜೇಶ್ ಮಹಾಲೆ ಹಾಗೂ ಕೃತಿನ್ ಆರ್. ಜೋಷಿ ಹಾಜರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News