ಮಡಿಕೇರಿ: ತಿಮ್ಮಯ್ಯ ಸ್ಮಾರಕ ಭವನಕ್ಕೆ 2.30 ಕೋಟಿ ರೂ. ಅನುದಾನ ಬಿಡುಗಡೆ

Update: 2018-01-04 17:19 GMT

ಮಡಿಕೇರಿ, ಜ.4 :ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಮುಂದುವರಿದ ಕಾಮಗಾರಿಗಾಗಿ ಸರ್ಕಾರ 2.30 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ತಿಳಿಸಿದ್ದಾರೆ.

ಸುಮಾರು ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ವೀರ ಸೇನಾನಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಸ್ಮಾರಕ ಭವನ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಜ.ತಿಮ್ಮಯ್ಯ ಅವರ ಜನ್ಮ ದಿನವಾದ ಕಳೆದ ಮಾ.31 ರಂದು ಸ್ಮಾರಕ ಭವನವನ್ನು ಉದ್ಘಾಟಿಸುವ ಗುರಿ ಇತ್ತಾದರೂ ಅಷ್ಟರೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ.  

ನಿರ್ಮಿತಿ ಕೇಂದ್ರ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಮೊದಲನೇ ಹಂತದ ಕಾಮಗಾರಿ 5.50 ಕೋಟಿ ರೂ. ವೆಚ್ಚದಲ್ಲಿ ನಡೆದಿದೆ. ಮಡಿಕೇರಿಯಲ್ಲಿರುವ ತಿಮ್ಮಯ್ಯ ಅವರ ಜನ್ಮ ನಿವಾಸ ಸನ್ನಿಸೈಡ್ ಸ್ಮಾರಕವಾಗಿ ಪರಿವರ್ತನೆಯಾಗುತ್ತಿದ್ದು, ಈಗಾಗಲೇ ಸುಮಾರು 1.35 ಕೋಟಿ ರೂ. ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ.

 “ಸನ್ನಿಸೈಡ್” ನಿವಾಸದ ಮೇಲ್ಚಾವಣಿಯನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದ್ದು, ಹಳೆಯ ಹಂಚುಗಳ ಮೆರಗನ್ನು ನೀಡಲಾಗಿದೆ. ಸ್ಮಾರಕದ ಒಳ ಆವರಣದಲ್ಲಿ ಮರದ ನೆಲಹಾಸುಗಳನ್ನು ಹಾಸಲಾಗಿದೆ. ಗೋಡೆಗಳಿಗೆ ಸುಣ್ಣಬಣ್ಣ ಬಳಿಯುವ ಕಾರ್ಯ ನಡೆದಿದೆ. ಗುಣಮಟದ ನೂತನ ಕಿಟಕಿ, ಬಾಗಿಲುಗಳನ್ನು ಅಳವಡಿಸಲಾಗಿದೆ. 

ತಿಮ್ಮಯ್ಯ ಅವರ ಜನ್ಮ ನಿವಾಸಕ್ಕೆ ಸೇರಿದ ಒಟ್ಟು 2.70 ಎಕರೆ ಪ್ರದೇಶವಿದ್ದು, ಎಲ್ಲಾ ಜಾಗವನ್ನು ಸ್ಮಾರಕ ಹಾಗೂ ಸೇನಾ ಶಸ್ತ್ರಾಸ್ತ್ರಗಳ ಪ್ರದರ್ಶನಕ್ಕಾಗಿ ಬಳಸಿಕೊಳ್ಳಬೇಕೆನ್ನುವ ಯೋಜನೆ ಇದೆ.

ತಿಮ್ಮಯ್ಯ ಅವರು ಸೇನೆಯಲ್ಲಿದ್ದಾಗ ಬಳಸುತ್ತಿದ್ದ ಸೇನಾಸಮವಸ್ತ್ರಗಳ ಪ್ರದರ್ಶನ, ಸ್ಮಾರಕದಲ್ಲಿ ಪರಿಣಾಮಕಾರಿ ಧ್ವನಿಯ ಮೂಲಕ ತಿಮ್ಮಯ್ಯ ಅವರ ಬಗ್ಗೆ ಮಾಹಿತಿ ನೀಡುವುದು, ಯುವ ಸಮೂಹಕ್ಕೆ ಸ್ಫೂರ್ತಿ ತುಂಬಬಲ್ಲ ಸೇನಾಪರಿಕರಗಳ ಸಂಗ್ರಹ ಹಾಗೂ ಭೂಸೇನೆ, ವಾಯುಸೇನೆ ಮತ್ತು ನೌಕಾದಳಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವ ಯೋಜನೆಗಳನ್ನು ರೂಪಿಸಲಾಗಿದೆ.

ಜನರಲ್ ತಿಮ್ಮಯ್ಯ ಅವರು ಹುಟ್ಟಿ ಬೆಳೆದ ಮನೆ ಸನ್ನಿಸೈಡ್‍ನ್ನು ಸ್ಮಾರಕ ನಿರ್ಮಾಣಕ್ಕಾಗಿ 2006-07ರಲ್ಲಿ ಆಯವ್ಯಯದಲ್ಲಿ ಅಂದಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಘೋಷಿಸಿದ್ದರು. ಅದರಂತೆ ಮನೆಯ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ತಾಂತ್ರಿಕತೆಯೊಂದಿಗೆ ಕಾಮಗಾರಿ ಕೈಗೊಂಡಿದ್ದು, ಜನರಲ್ ತಿಮ್ಮಯ್ಯ ಅವರು ಸೇವೆ ಸಲ್ಲಿಸಿದ ಸ್ಥಳದಿಂದ ಸಂಗ್ರಹಿಸಿದ ದಾಖಲೆಗಳು, ಸೇನಾ ಅಧಿಕಾರಿಗಳಿಂದ ನೀಡಲ್ಪಟ್ಟಿರುವ ಎರಡು ಬ್ಯಾಟಲ್ ಟ್ಯಾಂಕ್‍ಗಳು, ಪೈಟರ್ ವಿಮಾನ ಮತ್ತು ಇತರೆ ಸೇವೆ ಸಲ್ಲಿಸಿದ ಯುದ್ಧ ಟ್ಯಾಂಕರ್‍ಗಳನ್ನು ಸನ್ನಿಸೈಡ್‍ನ ಹೊರಾಂಗಣದಲ್ಲಿ ಇಡುವ ಗುರಿಯನ್ನು ಹೊಂದಲಾಗಿದೆ.

ಪ್ರವಾಸಿಗರನ್ನು ಆಕರ್ಷಿಸುವ ಮತ್ತು ಯುವ ಸಮೂಹಕ್ಕೆ ಸ್ಫೂರ್ತಿ ತುಂಬಬಲ್ಲ ಸ್ಮಾರಕ ಇದಾಗಬೇಕೆನ್ನುವ ಗುರಿಯನಿಟ್ಟುಕೊಂಡಿರುವ ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ಮೂಲಕ ವೀರಸೇನಾನಿಗೆ ಗೌರವ ನೀಡುವ ಭರವಸೆಯಲ್ಲಿದ್ದಾರೆ. ಮೊದಲ ಹಂತದ ಕಾಮಗಾರಿ  5.50 ಕೋಟಿ ರೂ.ಗಳಲ್ಲಿ ನಡೆಯಲಿದ್ದು, ಎರಡನೇ ಹಂತದ ಯೋಜನೆಗೆ ಹೆಚ್ಚುವರಿ ಅನುದಾನದ ಅಗತ್ಯವಿತ್ತು. ಇದೀಗ ರಾಜ್ಯ ಸರಕಾರ 2.30 ಕೋಟಿ ರೂ. ಗಳನ್ನು ಬಿಡುಗಡೆ ಮಾಡಿದೆ.

ಇದರೊಂದಿಗೆ ಜನರಲ್ ತಿಮ್ಮಯ್ಯ ಅವರ ಪುತ್ಥಳಿ, ಯುದ್ಧ ಸ್ಮಾರಕ ನಿರ್ಮಾಣ, ಉದ್ಯಾನವನ, ವಾಹನ ನಿಲುಗಡೆಗೆ ವ್ಯವಸ್ಥೆ ಮತ್ತಿತರ ಉಪಯೋಗಕ್ಕಾಗಿ ಸನ್ನಿಸೈಡ್‍ನ ಸುತ್ತಮುತ್ತಲಿನ ಜಾಗ ಬಿಟ್ಟು ಕೊಡಲು ಪ್ರಾದೇಶಿಕ ಸಾರಿಗೆ ಇಲಾಖೆಗೆ ಕೋರಲಾಗಿತ್ತು. ಅದರಂತೆ ಸಾರಿಗೆ ಇಲಾಖೆಯ ಸಿಬ್ಬಂದಿಗಳು ವಾಸವಿದ್ದ 7 ವಸತಿ ಗೃಹಗಳುಸೇರಿದಂತೆ ಒಟ್ಟು 2.40 ಎಕರೆ ಜಾಗವನ್ನು ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಯೋಜನೆಗಳಿಗಾಗಿ ಹಸ್ತಾಂತರಿಸಲಾಗಿದೆ.

ಅನುದಾನ ಬಿಡುಗಡೆಯಾಗಿರುವುದರಿಂದ ಉದ್ದೇಶಿತ ಯೋಜನೆ ಚುರುಕುಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನದ ಮುಂದುವರಿದ ಕಾಮಗಾರಿಗೂ 2 ಕೋಟಿ ರೂ. ಬಿಡುಗಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News