ಕೋಲಾರ: ನ್ಯಾಯಾಲಯ ಆದೇಶ ನೀಡಿದರೂ ಜಮೀನಿನ ಖಾತೆ ತೆರೆಯಲು ನಿರಾಕರಣೆ

Update: 2018-01-04 17:24 GMT

ಕೋಲಾರ,ಜ.4: ನ್ಯಾಯಾಲಯಗಳು ನೊಂದವರ ಪರ ಆದೇಶ ಮಾಡಿದರೂ ಸಹ ಕೆಲವೊಮ್ಮೆ ಅಧಿಕಾರಿಗಳು ಅನುಷ್ಠಾನ ಮಾಡುವುದಿಲ್ಲ ಇದರಿಂದಾಗಿ ನೊಂದವರು ನ್ಯಾಯದಿಂದ ವಂಚಿತರಾಗುತ್ತಾರೆ.ನ್ಯಾಯಾಲಯದ ಆದೇಶ ಕಾಗದದ ಮೇಲೆ ಉಳಿಯುತ್ತದೆ. ಅಧಿಕಾರಿಗಳ ಅಸಡ್ಡೆ ಮತ್ತು ಆಮೆಗತಿಯ ನಡೆಯನ್ನು ವಿರೋಧಿಸಿ ನೊಂದ ಕುಟುಂಬದವರು ಕೋಲಾರ ತಾಲ್ಲೂಕಿನ ಹೋಳೂರು ನಾಡ ಕಚೇರಿ ಮುಂದೆ ಕುಟುಂಬ ಸಮೇತ ಪ್ರತಿಭಟನೆ ನಡೆಸಿದರು. 

ಕೋಲಾರ ಜಿಲ್ಲೆಯ ಹೋಳೂರು ಗ್ರಾಮ ಪಂಚಾಯಿತ್ ನ ಮುಂದೆ ಚಿಲಿಪನಹಳ್ಳಿ ಗ್ರಾಮದ ಬಡ ಕುಟುಂಬದ ಅಬ್ದುಲ್ ರಹೀಂ ಮತ್ತು ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದರು. ಪಿತ್ರಾರ್ಜಿತ ಆಸ್ತಿಯ ಬಗ್ಗೆ ನ್ಯಾಯಾಲಯ ರಹೀಂ ಪರ ತೀರ್ಪು ನೀಡಿತ್ತು. ತೀರ್ಪಿನ ನಂತರ ತಮ್ಮ ಹೆಸರಿಗೆ ಖಾತೆ ತೆರೆಯುವಂತೆ ರಹೀಂ ಹೋಳೂರು ನಾಡ ಕಛೇರಿಗೆ ಅರ್ಜಿ ನೀಡಿದ್ದರು. 3 ವರ್ಷಗಳ ಕಾಲ ಅಲೆದಾಡಿದ್ದರೂ ಸಹ ಖಾತೆ ತೆರೆಯಲು ಅಧಿಕಾರಿಗಳು ನಿರಾಕರಿಸಿದರು. 

ನ್ಯಾಯಾಲಯ ಆದೇಶ ಮಾಡಿದರು ಸಹ ಲಂಚಬಾಕ ಅಧಿಕಾರಿಗಳಿಂದಾಗಿ ರಹೀಂ ಕುಟುಂಬಕ್ಕೆ ನ್ಯಾಯ ದೊರೆತಿಲ್ಲ. ಅಧಿಕಾರಿಗಳ ಅಸಡ್ಡೆ ಮತ್ತು ನಿಧಾನ ಪ್ರವೃತ್ತಿಯಿಂ ರೋಸಿ ಹೋದ ರಹೀಂ ಕುಟುಂಬ ನ್ಯಾಯಕ್ಕಾಗಿ ಗುರುವಾರ ಹೋಳೂರು ನಾಡಕಚೇರಿಯ ಮುಂದೆ ಅನಿರ್ಧಿಷ್ಟ ಕಾಲದವರೆಗೆ ಪ್ರತಿಭಟನೆ ಆರಂಭಿಸಿದೆ.

ಪ್ರತಿಭಟನೆ ನಂತರ ಸಹ ಅಧಿಕಾರಿಗಳು ಕಣ್ಣು ತೆರೆದಿಲ್ಲ. ಖಾತೆ ಮಾಡುವಂತೆ ನೀಡಲಾದ ಅರ್ಜಿಯನ್ನು ಕಚೇರಿಯ ಕಡತಗಳಲ್ಲಿ ಸೇರಿಸಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಉಪ ತಹಶೀಲ್ದಾರ್ ಹೊರಟು ಹೋಗಿದ್ದಾರೆ. ಹಾಲಿ ಉಪ ತಹಶೀಲ್ದಾರ್ ತಮಗೇನು ಗೊತ್ತಿಲ್ಲ ಎಂದು ನುಣಿಚುಕೊಂಡಿದ್ದಾರೆ. ಇದರಿಂದಾಗಿ ನ್ಯಾಯಾಲಯದ ಆದೇಶ ರಹೀಂ ಪರವಾಗಿದ್ದರೂ ಅನುಷ್ಠಾನವಾಗಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News