×
Ad

ಕೊಡಗಿನ ಕಲಿಗಳು ಗೋರಕ್ಷಣೆಗೆ ಸಜ್ಜಾಗಿ: ರಾಘವೇಶ್ವರಶ್ರೀ ಕರೆ

Update: 2018-01-04 23:16 IST

ಮಡಿಕೇರಿ, ಜ.4 : ದೇಶಕ್ಕೆ ಅಸಂಖ್ಯಾತ ವೀರಯೋಧರನ್ನು ನೀಡಿದ ಕೊಡಗಿನ ಕಲಿಗಳು ಗೋಮಾತೆಯ ರಕ್ಷಣೆಗೆ ಸಿದ್ಧರಾಗಿ ಎಂದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಕರೆ ನೀಡಿದರು.

ಪಟ್ಟಣದಲ್ಲಿ ನಡೆದ ಅಭಯ ಗೋಯಾತ್ರೆ ಸಂದೇಶ ಸಭೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಗೋವು ದೇಶದ ಪ್ರಾಣಿಯಲ್ಲ; ಪ್ರಾಣ. ಗೋಹತ್ಯೆ ಪ್ರಾಣಿ ಹತ್ಯೆಯಲ್ಲ; ಪ್ರಾಣಹತ್ಯೆ. ಭಾರತಮಾತೆಯ ರಕ್ಷಣೆಗೆ ಕೊಡಗಿನ ಕಲಿಗಳು ಮುಂದಾದಂತೆ ಗೋಮಾತೆಯ ರಕ್ಷಣೆಗೂ ಮುಂದಾಗಬೇಕು ಎಂದು ಸಲಹೆ ಮಾಡಿದರು.

ದೇಶದಲ್ಲಿ ಗೋವಿನ ರಕ್ತದ ಹೊಳೆ ಹರಿದರೂ, ಗೋವಿನ ಕರೆಗೆ ಓಗುಡುವವರು ದೇಶದಲ್ಲಿ ಕೋಟಿ ಕೋಟಿ ಮಂದಿ ಇದ್ದಾರೆ. ಇದುವೇ ಗೋಪರ ಹೋರಾಟಕ್ಕೆ ಪ್ರೇರಣೆ ಎಂದು ಹೇಳಿದರು. ಗೋಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು, ಜೀವಕ್ಕೆ ಬೆದರಿಕೆ ಇದ್ದರೂ ಇದನ್ನು ಸವಾಲಾಗಿ ಸ್ವೀಕರಿಸಿ, ಇಂಥ ಅಭಿಯಾನವನ್ನು ಆಯೋಜಿಸಿರುವುದು ಶ್ಲಾಘನೀಯ. ಇಂಥಹ ಕೆಚ್ಚಿನ ಯುವಕರು ಗೋ ಚಳುವಳಿಯ ಆಸ್ತಿ ಎಂದು ಬಣ್ಣಿಸಿದರು.

89 ಎಕರೆ ಗೋಮಾಳಕ್ಕಾಗಿ ವಿರಾಜಪೇಟೆಯಲ್ಲಿ ಅವಿರತ ಹೋರಾಟ ನಡೆಸಿಕೊಂಡು ಬಂದಿರುವ ಗೋಪ್ರೇಮಿಗಳ ಶ್ರಮವನ್ನು ಶ್ಲಾಘಿಸಿದರು. 
ಉತ್ತರಕಾಶಿ ಕಪಿಲಾಶ್ರಮದ ಶ್ರೀ ರಾಮಚಂದ್ರ ಗುರೂಜಿ ಆಶೀರ್ವಚನ ನೀಡಿ, ಗೋಹತ್ಯೆ ನಿಷೇಧದ ಒತ್ತಾಯ ಇಂದು ನಿನ್ನೆಯದಲ್ಲ. ಶ್ರೀರಾಮಚಂದ್ರಾಪುರಮಠದಿಂದ ಈ ಆಂದೋಲನವನ್ನು ಎರಡು ದಶಕಗಳಿಂದ ಹಮ್ಮಿಕೊಂಡು ಬಂದಿದೆ ಎಂದರು. ಗೋಮಾತೆಯ ರಕ್ಷಣೆಗೆ ಇಡೀ ದೇಶದ ಜನ ಕಂಕಣಬದ್ಧರಾಗಬೇಕು ಎಂದು ಸೂಚಿಸಿದರು.

ಭಾಗಮಂಡಲ ತಲಕಾವೇರಿ ಮಠದ ಆನಂದ ಶ್ರೀಗಳು ಮಾತನಾಡಿ, ಗೋಹತ್ಯೆ ನಿಷೇಧವನ್ನು ಗಾಂಧೀಜಿ ಪ್ರತಿಪಾದಿಸಿದ್ದರು. ಆದರೆ ಅವರ ಉತ್ತರಾಧಿಕಾರಿಗಳು ಎಂದೂ ಇದನ್ನು ಗಂಭೀರವಾಗಿ ಪರಿಗಣಿಸದೇ ದೇಶದ್ರೋಹ ಎಸಗಿದ್ದಾರೆ ಎಂದು ಕಿಡಿಕಾರಿದ್ದರು. ಅಕ್ಬರ್, ಔರಂಗಜೇಬನ ಕಾಲದಲ್ಲಿ ಕೂಡಾ ಗೋಹತ್ಯೆ ನಿಷೇಧ ಇತ್ತು. ಬ್ರಿಟಿಷರ ಕಾಲದಿಂದ ಇದು ವ್ಯಾಪಕವಾಗಿದೆ ಎಂದು ವಿಷಾದಿಸಿದರು.

ಸಾಧುಪ್ರಾಣಿಯಾದ ಗೋವನ್ನು ಹತ್ಯೆ ಮಾಡುವುದಕ್ಕಿಂತ ನೀಚ ಕೃತ್ಯ ಏನೂ ಇಲ್ಲ. ಗೋಮಾಂಸ ತಿನ್ನುವವರು ಗೋವಿನ ಹಾಲು ಕುಡಿದರೆ ಮನಸ್ಸು ಹೇಗೆ ಪರಿವರ್ತನೆಯಾಗುತ್ತದೆ ಎಂದು ನೋಡಿಕೊಳ್ಳಲಿ. ಇಂದಲ್ಲ ನಾಳೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬರುವುದು ಖಂಡಿತಾ. ಗೋಪ್ರೇಮಿಗಳನ್ನು ಎದುರಿಸಿ. ಅದು ಬಿಟ್ಟು ಪ್ರೀತಿಯಿಂದ ಸಾಕಿದ ಗೊವನ್ನು ಕದ್ದುಕೊಂಡು ಹೋಗುವುದು ಹೇಡಿತನ ಎಂದು ಹೇಳಿದರು.
ಪೊನ್ನಂಪೇಟೆ ರಾಮಕೃಷ್ಣ- ಶಾರದಾಶ್ರಮದ ಶ್ರೀ ಬೋಧಸ್ವರೂಪಾನಂದ ಮಹಾರಾಜ್ ಆಶೀರ್ವಚನ ನೀಡಿ, ಅಧಿಕಾರ ವರ್ಗಕ್ಕೆ ಗೋಹತ್ಯೆ ನಿಷೇಧ ಕಾಯ್ದೆ ತರುವಂತೆ ಒತ್ತಡ ತರುವ ನಿಟ್ಟಿನಲ್ಲಿ ಎಲ್ಲರೂ ಗೋಸಂರಕ್ಷಣೆ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಇದಕ್ಕೂ ಮುನ್ನ ಜಿಲ್ಲೆಯ ಕುಶಾಲನಗರದಲ್ಲಿ ಅಭಯ ಗೋಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಲಾಯಿತು. ಕುಶಾಲನಗರ, ಸುಂಟಿಕೊಪ್ಪ, ಮಡಿಕೇರಿ, ವಿರಾಜಪೇಟೆಯಲ್ಲಿ ಭವ್ಯ ಶೋಭಾಯಾತ್ರೆ ನಡೆಯಿತು. ಬಜರಂಗ ದಳದ ಮುಖಂಡ ಹಾಗೂ ಕೊಡಗು ಗೋ ಪರಿವಾರ ಟ್ರಸ್ಟ್ ಸದಸ್ಯ ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು. ಶ್ರೀಮಠದ ಜಿಲ್ಲಾ ಸಂಪರ್ಕಾಧಿಕಾರಿ ನಾಗರಾಜ ಪೆದಮಲೆ, ಲೆಕ್ಕಪರಿಶೋಧಕ ಈಶ್ವರ ಭಟ್, ಹವ್ಯಕ ವಲಯ ಕಾರ್ಯದರ್ಶಿ ಡಾ.ರಾಜಾರಾಂ, ಗೋ ಪರಿವಾರ ಕೊಡಗು ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷ ಕೆ.ಕೆ.ಶ್ಯಾಮ, ಕಾರ್ಯದರ್ಶಿ ಅನಿತಾ ಪೂವಯ್ಯ, ಭಾರತೀಯ ಗೋಪರಿವಾರ- ಕರ್ನಾಟಕದ ಮಧು ಗೋಮತಿ, ಶಿಶಿರ್ ಹೆಗಡೆ, ವಿನಾಯಕ ತಲವಟ್ಟ, ಉದಯಶಂಕರ ಭಟ್ ಮತ್ತಿತರರು ಹಾಜರಿದ್ದರು. ಜಿಲ್ಲೆಯಲ್ಲಿ ಸಂಗ್ರಹವಾದ 50 ಸಾವಿರಕ್ಕೂ ಅಧಿಕ ಹಸ್ತಾಕ್ಷರ ಪ್ರತಿಗಳನ್ನು ಸಮರ್ಪಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News