ಸಾವಿನ ಮನೆಯಲ್ಲೂ ಬಿಜೆಪಿ ರಾಜಕೀಯ: ಸಚಿವ ಮಹದೇವಪ್ಪ ವಾಗ್ದಾಳಿ
ಮೈಸೂರು,ಜ.5: ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಮಾಡಿರುವ ಘಟನೆ ಖಂಡನೀಯ, ಆದರೆ ಬಿಜೆಪಿಯವರು ಸಾವಿನ ಮನೆಯಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣವನ್ನು ರಾಜಕೀಕರಣಗೊಳಿಸಬಾರದು. ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಯಾವುದೇ ರಾಜಕೀಯ ಪಕ್ಷ ಮುಂದಾಗಬಾರದು. ಆದರೆ ಬಿಜೆಪಿ ಹಿಂದುತ್ವದ ಕಾರ್ಡ್ ಪ್ಲೇ ಮಾಡುತ್ತಿದೆ. ಇದು ಕರ್ನಾಟಕದಲ್ಲಿ ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ಚುನಾವಣಾ ವೇಳೆ ಭಾವನಾತ್ಮಕ ವಿಷಯಗಳನ್ನ ಜನರ ಮುಂದೆ ತರುವ ಪ್ರಯತ್ನ ಮಾಡಬಾರದು. ಮಂಗಳೂರಿನ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ. ಕೊಲೆಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ದೀಪಕ್ ರಾವ್ 7 ವರ್ಷಗಳ ಕಾಲ ಮುಸ್ಲಿಂ ಸಮುದಾಯದವರ ಜೊತೆ ಕೆಲಸ ಮಾಡಿದ್ದಾರೆ. ಅವರೇ ಸೌಹಾರ್ದವಾಗಿ ಬದುಕಿದ್ದರು. ಈಗ ಸೌಹಾರ್ದತೆ ಹಾಳು ಮಾಡುವ ಕೆಲಸ ಆಗಬಾರದು ಎಂದರು.
ಮಹಾರಾಷ್ಟ್ರದ ಕೊರೆಂಗಾವ್‍ನಲ್ಲಿ ನಡೆದ ಹಿಂಸಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕಾನೂನು ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಅಲ್ಲಿನ ಬಿಜೆಪಿ ಸರ್ಕಾರ ವಿಜಯೋತ್ಸವವನ್ನು ಹತ್ತಿಕ್ಕಿ ಭಯದ ವಾತಾವರಣ ನಿರ್ಮಾಣ ಮಾಡಿದೆ. ಇದು ದೇಶದ ಬಹುತ್ವದ ಐಕ್ಯತೆಗೆ ಧಕ್ಕೆಯನ್ನುಂಟು ಮಾಡಿದೆ. ಸಂವಿಧಾನದ ಬದಲಾವಣೆಯ ಕುರಿತು ಬಿಜೆಪಿ ನಾಯಕರ ಹೇಳಿಕೆಗಳು ಅವರ ದಿಕ್ಸೂಚಿಯನ್ನು ತೋರಿಸುತ್ತಿದೆ. ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ದೇಶದ ಐಕ್ಯತೆಗೆ ಗಂಡಾಂತರ ಕಾದಿದೆ. ಮಹಾರಾಷ್ಟ್ರ ಘಟನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ. ಈ ವಿಚಾರವಾಗಿ ಪ್ರಧಾನಿ ಹಾಗೂ ರಾಷ್ಟ್ರಪತಿಗಳು ಸೂಕ್ಷ್ಮವಾಗಿ ಚಿಂತನೆ ಮಾಡಬೇಕು. ಪ್ರಧಾನಿ ಮೋದಿಯವರು ಮಧ್ಯ ಪ್ರವೇಶಿಸಿ ಘಟನೆಯನ್ನು ಖಂಡಿಸಿ ದೇಶಕ್ಕೆ ಒಳ್ಳೆಯ ಸಂದೇಶ ನೀಡಬೇಕು ಎಂದು ಆಗ್ರಹಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಾನು ಕ್ಷೇತ್ರ ಹುಡುಕುತ್ತಿಲ್ಲ. ಪಕ್ಷ ಸೂಚಿಸಿದ ಕ್ಷೇತ್ರದಲ್ಲಿಯೇ ಕಣಕ್ಕಿಳಿಯುತ್ತೇನೆ. ಮಾಜಿ ಸಿಎಂ ವೀರಪ್ಪಮೊಯ್ಲಿ ನೆಲಮಂಗಲದಿಂದ ಕಣಕ್ಕಿಳಿಯಲು ಹೇಳುತ್ತಿದ್ದಾರೆ. ಪುಲಿಕೇಶಿನಗರ ಕ್ಷೇತ್ರದಲ್ಲಿ ಕಣಕ್ಕಿಳಿಯುವಂತೆ ಸಚಿವ ರೋಷನ್ ಬೇಗ್ ಹೇಳುತ್ತಿದ್ದಾರೆ. ಆದರೆ ಪಕ್ಷ ಸೂಚಿಸಿದ ಕ್ಷೇತ್ರದಲ್ಲಿ ಕಣಕ್ಕಿಳಿಯುತ್ತೇನೆ. ಪಕ್ಷ ಹಾಗೂ ಕಾರ್ಯಕರ್ತರು ಒಪ್ಪಿದರೆ ಮಾತ್ರ ನನ್ನ ಪುತ್ರ ಸುನಿಲ್ ಬೋಸ್ ಚುನಾವಣೆಗೆ ಸ್ಪರ್ಧಿಸುತ್ತಾನೆ ಎಂದು ಸ್ಪಷ್ಟಪಡಿಸಿದರು.