×
Ad

ರಾಜ್ಯದ ಹಣಕಾಸಿನ ವ್ಯವಹಾರ ಉತ್ತಮವಾಗಿದೆ: ಮುಖ್ಯಮಂತ್ರಿ ಸಿದ್ಧರಾಮಯ್ಯ

Update: 2018-01-05 20:15 IST

ಕಡೂರು,ಜ.5: ಕರ್ನಾಟಕದ ಇತಿಹಾಸ, ಸಂಸ್ಕೃತಿ, ಭಾಷೆ ಯೋಗಿ ಆದಿತ್ಯನಾಥ್‍ರಿಂದ ಕಲಿಯಬೇಕಿಲ್ಲ. ಸಂವಿಧಾನದಲ್ಲಿ ನಂಬಿಕೆಯಿಲ್ಲದವರು ರಾಜಕಾರಣಕ್ಕೆ ನಾಲಾಯಕ್ಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಸಾಧನಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿ.ಜೆ.ಪಿ. ಯವರಿಗೆ ಎರಡು ನಾಲಿಗೆ, ಎರಡು ತಲೆಯಿದೆ. ಟಿಪ್ಪು ಸುಲ್ತಾನ್ ಬಗ್ಗೆ ಅಧಿಕಾರದಲ್ಲಿದ್ದಾಗ ಒಂದು ರೀತಿ, ಈಗ ಒಂದು ರೀತಿ ಮಾತನಾಡುತ್ತಿದ್ದಾರೆಂದು ಆರೋಪಿಸಿದರು. 

ಕಳೆದ 5 ವರ್ಷದ ಅವಧಿಯ ನಮ್ಮ ಬಜೆಟ್ ಉತ್ತಮವಾಗಿದೆ. ಹಣಕಾಸಿನ ವ್ಯವಹಾರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆರ್ಥಿಕ ತಜ್ಞ ಮನಮೋಹನ್‍ಸಿಂಗ್ ಹೇಳಿದ್ದಾರೆ. ಮುಂದಿನ ನಮ್ಮ ಬಜೆಟ್ 2,56,000 ಕೋಟಿ ರೂ.ಗಳದ್ದಾಗಿರುತ್ತದೆ. ಆರ್ಥಿಕವಾಗಿ ಏನೂ ಅರಿಯದ ಯಡಿಯೂರಪ್ಪ ನಮ್ಮ ಹಣಕಾಸಿನ ವ್ಯವಹಾರದ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿಗರ ಮನೆದೇವರು ಸುಳ್ಳೇ ಆಗಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿಯಲ್ಲಿ ಚಿತ್ರದುರ್ಗ, ತುಮಕೂರು ಕಡೆಗೆ ನೀರು ಹರಿಸಲು 12,340 ಕೋಟಿ ರೂಗಳಾಗಿದ್ದು, ಕಾಮಗಾರಿ ತ್ವರಿತವಾಗಿ ಮುಗಿಸಲಾಗುವುದು ಎಂದು ಹೇಳಿದರು.

ಭದ್ರಾ ಮೇಲ್ದಂಡೆ ಅಡಿಯಲ್ಲಿ ಕಡೂರು ಕ್ಷೇತ್ರಕ್ಕೆ ಕೆರೆಗಳನ್ನು ತುಂಬಿಸಲು 2.29 ಟಿ.ಎಂ.ಸಿ. ನೀರು ಸಿಗಲಿದೆ. ಈ ಯೋಜನೆಗೆ 108 ಕೋಟಿ ರೂಗಳ ಅನುದಾನ ನೀಡಲಾಗಿದೆ. ಈ ಯೋಜನೆಯಿಂದ 55 ಸಾವಿರ ಎಕರೆಗೆ ಸೂಕ್ಷ್ಮ ನೀರಾವರಿ ದೊರಕಲಿದೆ. 2018 ಮೇ ಒಳಗೆ ಸುರಂಗ ಮಾರ್ಗ ಕಾಮಗಾರಿ ಮುಗಿಯಲಿದೆ. ಬರಡು ಪ್ರದೇಶಗಳ ಕೆರೆಗಳನ್ನು ತುಂಬಿಸುವುದು ನಮ್ಮ ಗುರಿಯಾಗಿದೆ. ನೀರಿನ ಲಭ್ಯತೆ ಎಲ್ಲಿ ಸಿಗುತ್ತದೋ ಅದನ್ನು ಬಳಸಿಕೊಂಡು ರೈತರಿಗೆ ನೀರನ್ನು ಕೊಡುವ ಉದ್ದೇಶವನ್ನು ಹೊಂದಲಾಗಿದೆ. ರಾಜ್ಯದ ಕೆರೆಗಳನ್ನು ತುಂಬಿಸಬೇಕಿದೆ. ಕಳೆದ 13 ವರ್ಷಗಳಿಂದ ರಾಜ್ಯ ಬರಗಾಲಕ್ಕೆ ತುತ್ತಾಗಿದೆ ಎಂದು ತಿಳಿಸಿದರು.

ಶಾಶ್ವರ ನೀರಾವರಿಗಾಗಿ ಈಗಾಗಲೇ 45 ಸಾವಿರ ಕೋಟಿ ಹಣ ಖರ್ಚು ಮಾಡಲಾಗಿದೆ. ಮಾರ್ಚ್ ಒಳಗೆ 50 ಸಾವಿರ ಕೋಟಿ ರೂ. ಖರ್ಚಾಗಲಿದೆ. ಎತ್ತಿನಹೊಳೆ ಯೋಜನೆಯಡಿ ಕಡೂರು ಕ್ಷೇತ್ರಕ್ಕೂ ನೀರು ಬರಲಿದೆ. ಈ ಯೋಜನೆಗೆ ಈಗಾಗಲೇ 2500 ಕೋಟಿ ರೂ. ಖರ್ಚು ಮಾಡಲಾಗಿದೆ. ರಾಜ್ಯದಲ್ಲಿ ನೀರಾವರಿ ಯೋಜನೆಗಳ ಜೊತೆಗೆ ಕೆರೆಗಳನ್ನು ತುಂಬಿಸಲು ವ್ಯಾಪಕವಾಗಿ ಕಾಮಗಾಗಿ ಕೈಗೆತ್ತಿಕೊಳ್ಳಲಾಗಿದೆ. ರಾಜ್ಯದ ರೈತರನ್ನು ಕಾಪಾಡಬೇಕಿದೆ. ಕರ್ನಾಟಕ ಹಸಿವು ಮುಕ್ತ, ಗುಡಿಸಲು ಮುಕ್ತ ಅಪೌಷ್ಠಿಕತೆಯಿಂದ ಮುಕ್ತವಾಗಬೇಕಿದೆ ಎಂಬುದೇ ನಮ್ಮ ಸಂಕಲ್ಪ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News