ನಾನೂ ಕೂಡ ಬಿಜೆಪಿಯ ಟಿಕೆಟ್ ಆಕಾಂಕ್ಷಿ: ಎಂ.ಪಿ.ಸುನಿಲ್

Update: 2018-01-05 16:43 GMT

ಗುಂಡ್ಲುಪೇಟೆ,ಜ.5: ಮುಂಬರುವ ವಿಧಾನಸಭಾ ಚುನಾವಣೆಗೆ ನಾನೂ ಕೂಡ ಬಿಜೆಪಿ ಪಕ್ಷದಿಂದ ಪ್ರಬಲ ಆಕಾಂಕ್ಷಿ ಎಂದು ಎಂ.ಡಿ.ಸಿ.ಸಿ. ನಿರ್ದೇಶಕ ಎಂ.ಪಿ.ಸುನೀಲ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತೀಯ ಜನತಾ ಪಾರ್ಟಿಯಲ್ಲಿಗ ಹೊಸಮುಖಗಳಿಗೆ ಅವಕಾಶ ಕಲ್ಪಿಸಲಾಗುತ್ತಿದ್ದು, ಈ ಅವಕಾಶವನ್ನು ಬಳಸಿಕೊಂಡು ಜನಸೇವೆಗೆ ಸಿದ್ದನಾಗಿದ್ದೇನೆ. ಇದಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಕೈಜೋಡಿಸಬೇಕು’ ಎಂದು ವಿನಂತಿ ಮಾಡಿಕೊಂಡರು.

“ಈಗಾಗಲೆ ಈ ಬಗ್ಗೆ ಮಾಜಿ ಸಚಿವರು ಹಾಗೂ ಬಿಜೆಪಿಯ ಜಿಲ್ಲಾ ಚುನಾವಣಾ ಉಸ್ತುವಾರಿ ವಿ.ಸೋಮಣ್ಣ ರವರ ಬಳಿ ಅವಕಾಶ ಕಲ್ಪಿಸುವಂತೆ ಕೇಳಿದ್ದೇನೆ. ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪರವರ ಬಳಿಯೂ ತೆರಳಿ ನನ್ನ ಸ್ಫರ್ಧೆಗೆ ಅವಕಾಶ ಕೋರುತ್ತೇನೆ. ಈಗಾಗಲೆ ಕ್ಷೇತ್ರದ ಜನತೆ ಬದಲಾವಣೆ ಬಯಸಿದ್ದಾರೆ. ಇದಕ್ಕೆ ಪೂರಕವೆಂಬಂತೆ ಹೊಸ ಮುಖಕ್ಕೆ ಟಿಕೆಟ್ ನೀಡಲು ಪಕ್ಷದ ಹೈಕಮಾಂಡ್ ಉತ್ಸುಕರಾಗಿದ್ದಾರೆ. ಈ ಅವಕಾಶ ಬಳಸಿಕೊಂಡು ನಾನು ಟಿಕೆಟ್ ಕೇಳುತ್ತೇನೆ ಎಂದರು.

“ನನ್ನ ದೊಡ್ಡಪ್ಪ ಎಂ.ವೃಷಬೇಂದ್ರಪ್ಪ ರವರು 2004ರಲ್ಲಿಯೇ ಬಿಜೆಪಿಯಿಂದ ಸ್ಫರ್ಧಿಸಿದ್ದರು. 2008ರ ಚುನಾವಣೆಯಲ್ಲಿ ಹೊಸಮುಖಕ್ಕೆ ಟಿಕೆಟ್ ನೀಡಿದ ಪರಿಣಾಮವಾಗಿ ಕಡಿಮೆ ಅಂತರದಲ್ಲಿ ನಿರಂಜನಕುಮಾರ್ ಪರಾಭವಗೊಂಡರು. ನಂತರದ ದಿನಗಳಲ್ಲಿ ಅಂತರ ಹೆಚ್ಚಾಗಿದ್ದು ಇದೀಗ ನನಗೆ ಟಿಕೆಟ್ ನೀಡಿದರೆ ಸ್ಫರ್ಧಿಸುತ್ತೇನೆ ಹಾಗೂ ಪಕ್ಷದ ಎಲ್ಲಾ ಹಿರಿಯ- ಕಿರಿಯ ಮುಖಂಡರನ್ನೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದುಕೊಂಡು ಮುನ್ನಡೆಸುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನನಗೆ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ. ಅಲ್ಲದೆ ಯಾರಿಗೇ ಟಿಕೆಟ್ ಸಿಕ್ಕರೂ ಪಕ್ಷದ ಚೌಕಟ್ಟಿನಲ್ಲಿ ದುಡಿಯುತ್ತೇನೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸ್ಪಷ್ಟಪಡಿಸಿದರು. 

ಚುನಾವಣೆಗೆ ಸ್ಪರ್ಧಿಸುವುದಕ್ಕೆ ಪೂರಕವಾಗಿ ಕ್ಷೇತ್ರದ ಬಿಜೆಪಿ ಮುಖಂಡರನ್ನು ಸಂಪರ್ಕಿಸಲಾಗಿದೆ. ಇನ್ನು ಮುಂದೆ ಹಳ್ಳಿ-ಹಳ್ಳಿಗೆ ಭೇಟಿ ನೀಡಿ ಜನರ ವಿಶ್ವಾಸಗಳಿಸಲಾಗುತ್ತದೆ ಎಂದು ತಿಳಿಸಿದರು.

ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಸಿ.ಮಧು, ಹೂರದಳ್ಳಿ ಪ್ರಸಾದ್, ರಾಜ್ಯ ಬಿಜೆಪಿ ಕಾರ್ಯಕಾರ್ಯಣಿ ಸದಸ್ಯ ಸಿ. ಹುಚ್ಚೇಗೌಡ, ಹಂಗಳ ರಾಜಪ್ಪ, ಕಾರ್ರಾಗಿ ಹುಂಡಿ ಮಲ್ಲಿಕಾರ್ಜುನ, ಪಟೇಲ್ ಶಾಂತಪ್ಪ, ಪಡಗೂರು ರಾಜಶೇಖರ್ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News