×
Ad

ನಕಲಿ ವೈದ್ಯರ ಎಡವಟ್ಟಿಗೆ ಕುರುಡಾದ ಕಂದಮ್ಮ; ಆರೋಪ

Update: 2018-01-05 22:42 IST

ಚಾಮರಾಜನಗರ, ಜ.5: ನಕಲಿ ವೈದ್ಯರ ಎಡವಟ್ಟಿನಿಂದಾಗಿ ನಾಲ್ಕು ವರ್ಷದ ಕಂದಮ್ಮ ಕಣ್ಣು ಕಳೆದುಕೊಂಡ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ತೆರಕಣಾಂಬಿ ಗ್ರಾಮದ ಕುಮಾರ್ ಎಂಬವರು ಜ್ವರದಿಂದ ಬಳಲುತ್ತಿದ್ದ ತಮ್ಮ ಮಗಳು ದೀಕ್ಷಿತಾಳನ್ನು 2017ರ ಅ.21 ಕೋಕಿಲಾಳ ಕ್ಲಿನಿಕ್ ಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದರು. ಈ ವೇಳೆ ಕೋಕಿಲಾ ತನ್ನ ಬಳಿ ಇದ್ದ ಕೆಲವು ಮಾತ್ರೆ ಹಾಗೂ ಔಷಧಗಳನ್ನು ಕೊಟ್ಟು ಕಳುಹಿಸಿದ್ದಾರೆ. ಕೋಕಿಲಾ ಕೊಟ್ಟ ಔಷಧವನ್ನು ಕುಮಾರ್ ತಮ್ಮ ಮಗಳಿಗೆ ನೀಡಿದ್ದರೂ ಮಗುವಿನ ಜ್ವರ ಮಾತ್ರ ಕಡಿಮೆಯಾಗಿರಲಿಲ್ಲ. ಒಂದೆರಡು ದಿನಗಳ ಬಳಿಕ ಕುಮಾರ್ ತಮ್ಮ ಮಗುವನ್ನು ಗುಂಡ್ಲುಪೇಟೆ ಸರಕಾರಿ ಆಸ್ಪತ್ರೆಗೆ ತೋರಿಸಿದಾಗ ವೈದ್ಯರು, ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದರು. ಮೈಸೂರಿನ ಆಸ್ಪತ್ರೆಯಲ್ಲಿ ದೀಕ್ಷಿತಾಳನ್ನು ಪರೀಕ್ಷಿಸಿದ ವೈದ್ಯರು ದೀಕ್ಷಿತಾಳ ಬಲಗಣ್ಣಿನ ದೃಷ್ಟಿ ಹೋಗಿರುವುದನ್ನು ದೃಢಪಡಿಸಿದ್ದಾರೆಂದು ತಿಳಿದು ಬಂದಿದೆ.

ಘಟನೆ ಸಂಬಂಧ ಕೋಕಿಲಾರ ವಿರುದ್ಧ ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕುಮಾರ್ ಆರೋಪಿಸಿದ್ದಾರೆ.

ಕೋಕಿಲಾ ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲವಾದರೂ ಮನೆಯ ತಳಹದಿಯಲ್ಲಿ ನೇಮ್‌ಬೋರ್ಡ್ ಇಲ್ಲದೇ ಕ್ಲಿನಿಕ್ ನಡೆಸುತ್ತಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ. ಕೋಕಿಲಾ ಎಂಬಿಬಿಎಸ್ ಪಡೆಯದೇ ವೈದ್ಯ ವೃತ್ತಿ ಆರಂಭಿಸಿದ್ದರೂ ಪೊಲೀಸ್ ಇಲಾಖೆಯಲ್ಲಿ ಮುಖ್ಯ ಪೇದೆ ಆಗಿರುವ ಪತಿ ಈ ಬಗ್ಗೆ ಚಕಾರ ಎತ್ತಿಲ್ಲ. ಪತಿ ಪೊಲೀಸ್ ಇಲಾಖೆಯಲ್ಲಿದ್ದಾರೆಂಬ ಧೈರ್ಯದಿಂದಲೇ ಈಕೆ ಈ ವೃತ್ತಿ ಮಾಡುತ್ತಿದ್ದಾರೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಕಳೆದ ಒಂದೆರಡು ವರ್ಷಗಳ ಹಿಂದೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪಾಂಡು ವಿಜಯನ್ ಮತ್ತು ಇನ್ನಿತರ ಅಧಿಕಾರಿಗಳು ಕೋಕಿಲಾ ನಡೆಸುತ್ತಿರುವ ಕ್ಲಿನಿಕ್ ಮೇಲೆ ದಾಳಿ ನಡೆಸಿ, ಬಾಗಿಲು ಮುಚ್ಚಿಸಿದ್ದರು ಎನ್ನಲಾಗಿದ್ದು, ಪತಿ ಪೊಲೀಸ್ ಇಲಾಖೆಯಲ್ಲಿರುವ ಧೈರ್ಯದಿಂದ ಕೋಕಿಲಾ ಪುನಃ ಕ್ಲಿನಿಕ್ ತೆರೆದಿದ್ದಾರೆಂದು ನಾಗರಿಕರು ದೂರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News