×
Ad

ಲಕ್ಷಾಂತರ ರೂ. ಮೌಲ್ಯದ ಮೆಕ್ಕೆಜೋಳ ಬೆಂಕಿಗಾಹುತಿ: ಸೂಕ್ತ ಪರಿಹಾರಕ್ಕೆ ಒತ್ತಾಯ

Update: 2018-01-05 22:51 IST

ಶಿವಮೊಗ್ಗ, ಜ. 5: ಕಟಾವು ಮಾಡಿ ಜಮೀನಿನಲ್ಲಿ ರಾಶಿ ಹಾಕಿದ್ದ ಲಕ್ಷಾಂತರ ರೂ. ಮೌಲ್ಯದ ಮೆಕ್ಕೆಜೋಳ ಬೆಂಕಿಗಾಹುತಿಯಾಗಿರುವ ಘಟನೆ ಶಿವಮೊಗ್ಗ ತಾಲೂಕಿನ ಆಲ್ದಳ್ಳಿ ಗ್ರಾಮದಲ್ಲಿ ನಡೆದಿದೆ. 

ವೀರೇಶ್ ಹಾಗೂ ಹಾಲಮ್ಮ ಎಂಬವರಿಗೆ ಸೇರಿದ ಮೆಕ್ಕೆಜೋಳದ ರಾಶಿಗೆ ಗುರುವಾರ ಸಂಜೆ ಬೆಂಕಿ ಬಿದ್ದಿದ್ದು, ತಕ್ಷಣವೇ ಗ್ರಾಮಸ್ಥರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸರಿಸುಮಾರು ಒಂದೂವರೆ ಲಕ್ಷಕ್ಕೂ ಅಧಿಕ ಮೊತ್ತದ ಬೆಳೆ ನಷ್ಟವಾಗಿದೆ ಎಂದು ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. 

ವೀರೇಶ್‍ರವರು ಐದೂವರೆ ಎಕರೆ ಪ್ರದೇಶದಲ್ಲಿ ಹಾಗೂ ಹಾಲಮ್ಮ ಎಂಬವರು ಎರಡೂವರೆ ಎಕರೆ ಪ್ರದೇಶದಲ್ಲಿ ಕಷ್ಟಪಟ್ಟು ಬೆಳೆದಿದ್ದ ಮೆಕ್ಕೆಜೋಳ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಸ್ಥಿತಿ ರೈತರದ್ದಾಗಿದೆ.  ರೈತರು ಬಡ ವರ್ಗಕ್ಕೆ ಸೇರಿದವರಾಗಿದ್ದು, ಬೆಳೆ ವಿಮೆ ಕೂಡ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದಾರೆ. 

ಪರಿಶೀಲನೆ: ಮೆಕ್ಕೆಜೋಳ ಬೆಂಕಿಗೆ ತುತ್ತಾಗಿರುವ ವಿಷಯ ತಿಳಿದು ಶುಕ್ರವಾರ ಹೊಳಲೂರು ಜಿ.ಪಂ. ಕ್ಷೇತ್ರದ ಸದಸ್ಯ ಕೆ.ಇ.ಕಾಂತೇಶ್‍ರವರು ಆಲದಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರ ಜೊತೆ ಸಮಾಲೋಚನೆ ನಡೆಸಿದರು. ರೈತರಾದ ವೀರೇಶ್ ಹಾಗೂ ಹಾಲಮ್ಮರವರಿಗೆ ಭಾರೀ ಪ್ರಮಾಣದ ನಷ್ಟವಾಗಿದೆ. ಮಾನವೀಯತೆ ದೃಷ್ಟಿಯಿಂದ  ರೈತರಿಗೆ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಸೂಕ್ತ ಪರಿಹಾರ ಧನ ನೀಡಬೇಕು. ಈ ಸಂಬಂಧ ತಾವು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸುವುದಾಗಿ ಕೆ.ಇ.ಕಾಂತೇಶ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News