ಕಾಂಗ್ರೆಸ್ ಮುಕ್ತ ರಾಜ್ಯ ಅಸಾಧ್ಯ: ಡಿ. ಬಸವರಾಜ್
ದಾವಣಗೆರೆ,ಜ.5: ಸಿಎಂ ಸಿದ್ದರಾಮಯ್ಯ ಅವರು ವಿರುದ್ದ ಭ್ರಷ್ಟಾಚಾರದ ಅರೋಪ ಆಧಾರ ರಹಿತ ಶುದ್ಧ ಸುಳ್ಳು ಎಂದು ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್ ಹೇಳಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್. ಯಡಿಯೂರಪ್ಪನವರು ತಮ್ಮ ಅಧಿಕಾರದ ಅವಧಿಯಲ್ಲಿ ನಾಡಿನ ಪ್ರಾಕೃತಿಕ ಸಂಪತ್ತು ಲೂಟಿ ಮಾಡಿ ಬಳ್ಳಾರಿ ರೆಡ್ಡಿಗಳ ಅಣತಿಯಂತೆ ಆಡಳಿತ ನಡೆಸಿ ರಾಜ್ಯದ ಬೊಕ್ಕಸಕ್ಕೆ ಲಕ್ಷಾಂತರ ಕೋಟಿ ನಷ್ಟ ಉಂಟು ಮಾಡಿದ್ದಾರೆ. ಬೆಲೇಕೆರೆ ಬಂದರಿನಲ್ಲಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದ ಕಬ್ಬಿಣದ ಅದಿರನ್ನು ಸಹ ಬಿಡದೇ ಲೂಟಿ ಮಾಡಿದ ಕೀರ್ತಿ ಬಿ.ಎಸ್.ವೈ. ಆಡಳಿತಕ್ಕೆ ಸಲ್ಲುತ್ತದೆ. ಭೂ ಡಿನೋಟೀಫಿಕೇಷನ್ ಹಾಗೂ ಅಕ್ರಮ ಗಣಿಗಾರಿಕೆ ಫಲಾನುಭವಿಗಳಿಂದ, ಬಿ.ಎಸ್.ವೈ. ಒಡೆತನದ ಪ್ರೇರಣಾ ಸಂಸ್ಥೆಗೆ ಬ್ಯಾಂಕ್ ಮುಖಾಂತರ ರೂ. 20 ಕೋಟಿ ಉಡುಗೊರೆ ನೆಪದಲ್ಲಿ ಲಂಚವನ್ನು ಪಡೆದ ಕುಖ್ಯಾತಿ ಬಿ.ಎಸ್.ವೈ.ಗೆ ಇದೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಅವರು ಬಡವರ ರಾಯಭಾರಿಯಂತೆ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ರಾಜ್ಯಕ್ಕೆ ಮುಖ್ಯಮಂತ್ರಿಯಾಗಿರುವುದು ಬಡವರ ಪಾಲಿನ ಭಾಗ್ಯವಾಗಿದೆ. ಇಂತವರ ಬಗ್ಗೆ ವಿಧಾನಸಭಾ ಚುನಾವಣಾ ಹತ್ತಿರವಾಗುತ್ತಿರುವ ಸಮಯದಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಬಿಜೆಪಿ ನಾಯಕರು ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ರಾಜಕೀಯ ಪಿತೂರಿ ಮಾಡುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.
ರಾಜ್ಯ ಕಾಂಗ್ರೆಸ್ ಮುಕ್ತವೆಂಬುದು ಬಿಜೆಪಿಗೆ ಅಂಟಿದ ರೋಗ. ಈ ರೋಗಕ್ಕೆ 2018ರ ರಾಜ್ಯ ವಿಧಾಸಭಾ ಚುನಾವಣೆ ಹಾಗೂ 2019ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುವುದು. ಬಿ.ಎಸ್.ವೈ. ನೂರು ಜನ್ಮ ಹೆತ್ತರು ಕಾಂಗ್ರೆಸ್ ಮುಕ್ತ ರಾಜ್ಯ ಮಾಡಲು ಸಾಧ್ಯವಿಲ್ಲವೆಂದರು.
ರಾಜ್ಯದಲ್ಲಿ ಉತ್ತಮ ಆಡಳಿತವಿದೆ. ಆದರೆ ಕೇಂದ್ರ ಸರ್ಕಾರ ಗೋಡ್ಸೆ ಆರಾಧಕರ ಕೈಯಲ್ಲಿ ಸಿಲುಕಿದ್ದು 2019ರಲ್ಲಿ ಮುಕ್ತಿ ಸಿಗಲಿದೆ. ಬಿ.ಎಸ್. ಯಡಿಯೂರಪ್ಪ ಅವರು ಭ್ರಷ್ಟಾಚಾರದ ಕೆಲವು ಪ್ರಕರಣಗಳು ಸಾಕ್ಷಾಧಾರ ಕೊರತೆಯಿಂದ ಕೆಲವು ಮೊಕದ್ದಮೆಗಳಲ್ಲಿ ಖುಲಾಸೆ ಆಗಿವೆ. ರಾಜ್ಯದ ನ್ಯಾಯಾಲಯಗಳಲ್ಲಿ ಇನ್ನು ಹತ್ತಾರು ಮೊಕದ್ದಮೆಗಳಿದ್ದು, ಅವರು ದೋಷ ಮುಕ್ತರಲ್ಲ ಎಂದರು.
ಚುನಾವಣೆ ಸಮೀಪದಲ್ಲಿದ್ದು, ಸೋಲು ಗ್ಯಾರಂಟಿ ಎಂದು ತಿಳಿದಿರುವ ಬಿಜೆಪಿ ರಾಜ್ಯದಲ್ಲಿ ಶಾಂತಿ ಕದಡುವ ಸಾಧ್ಯತೆ ಇದ್ದು, ಸರ್ಕಾರ ಗುಪ್ತಚರ ಇಲಾಖೆ ಮತ್ತು ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಟ ಪಡಿಸಬೇಕೆಂದು ಸಿಎಂ ಮತ್ತು ಗೃಹಸಚಿವರಿಗೆ ವಿನಂತಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಡಾ. ಸಿ.ಆರ್. ನಸೀರ್ ಅಹ್ಮದ್, ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಅಲ್ಲಾವುಲ್ಲಿ ಘಾಜಿಖಾನ್, ಎಂ.ಕೆ. ಲಿಯಾಕತ್ ಅಲಿ, ಡಿ. ಶಿವಕುಮಾರ್, ಜಿಯಾವುಲ್ಲಾ, ಫಾರುಕ್, ಇರ್ಫಾನ್, ಸುನೀಲ್ ಉಪಸ್ಥಿತರಿದ್ದರು.