ರಾಜ್ಯ ಸರಕಾರದ ಜವಳಿ ನೀತಿ ಜನಪರವಾಗಿದೆ: ರವೀಂದ್ರ ಕಲಬುರ್ಗಿ
ಧಾರವಾಡ, ಜ.5: ರಾಜ್ಯ ಸರಕಾರವು ನೇಕಾರರ ಹಿತರಕ್ಷಣೆ ಹಾಗೂ ನೇಕಾರಿಕೆ ಅಭಿವೃದ್ಧಿಗೆ ಪೂರಕವಾದ ಅನೇಕ ಕ್ರಮಗಳನ್ನು ಕೈಗೊಂಡಿದೆ. ರಾಜ್ಯದ ನೂತನ ಜವಳಿ ನೀತಿ ಜನಪರವಾಗಿದೆ ಎಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಹೇಳಿದ್ದಾರೆ.
ಶುಕ್ರವಾರ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸರಕಾರದ ನೂತನ ಜವಳಿ ನೀತಿ ಹಾಗೂ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನೇಕಾರಿಕೆ ಒಂದು ಗುಡಿ ಕೈಗಾರಿಕೆಯಾಗಿದ್ದರೂ ಇಂದು ಬೃಹತ್ ಆಗಿ ಬೆಳೆದಿದೆ. ಅಸಂಖ್ಯಾತ ಕುಟುಂಬಗಳು ನೇಕಾರಿಕೆಯನ್ನು ಅವಲಂಬಿಸಿ ಬದುಕುತ್ತಿವೆ. ಪ್ರಸ್ತುತ ರಾಜ್ಯ ಸರಕಾರ ನೇಕಾರರ ಸಾಲ ಮನ್ನಾ ಮಾಡಿ ನೆರವು ನೀಡಿದೆ ಎಂದು ಅವರು ಹೇಳಿದರು.
ಇಲಾಖೆ ಮತ್ತು ನಿಗಮದಿಂದ ನೇಕಾರರ ಹಿತರಕ್ಷಣೆ ಹಾಗೂ ಉದ್ಯೋಗ ಭದ್ರತೆಗಾಗಿ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಸಾಲಮನ್ನಾ, ಸಹಾಯಧನ, ನಿರುದ್ಯೋಗಿಗಳಿಗೆ ತರಬೇತಿ, ರಿಯಾಯತಿಯಲ್ಲಿ ನೂಲು ವಿತರಣೆ, ವಿದ್ಯುತ್ ಮಗ್ಗಗಳ ಪೂರೈಕೆ ಹೀಗೆ ಅನೇಕ ರೀತಿಯ ನೆರವಿನ ಮೂಲಕ ನೇಕಾರಿಕೆ ಸದೃಢಗೊಳಿಸಲು ಕ್ರಮಕೈಗೊಂಡಿದೆ ಎಂದು ರವೀಂದ್ರ ಕಲಬುರ್ಗಿ ತಿಳಿಸಿದರು.
ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ವೇದವ್ಯಾಸ ಕೌಲಗಿ ಮಾತನಾಡಿ, ಜವಳಿ, ಕೈಮಗ್ಗದಿಂದ ಸಿಗುವ ಬಟ್ಟೆ ಗುಣಮಟ್ಟದಾಗಿರುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬಟ್ಟೆ ತಯಾರಿಕೆಯಲ್ಲಿ ಉತ್ತಮ ಗುಣಮಟ್ಟವನ್ನು ನೇಕಾರರು ಕಾಯ್ದುಕೊಂಡು ಬಂದಿದ್ದಾರೆ ಎಂದರು.
ರಾಜ್ಯ ಸರಕಾರ ನೇಕಾರ ವೃತ್ತಿಗೆ ಪುನಃಶ್ಚೇತನ ನೀಡಲು ಅನೇಕ ಕ್ರಮಕೈಗೊಂಡಿದೆ. ಸರಕಾರ ಪ್ರಾಯೋಜಿತ ಜವಳಿ ನೀತಿ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಿ ಮತ್ತು ನೇಕಾರ ಸಮಾಜ ಆರ್ಥಿಕವಾಗಿ ಬಲಗೊಳ್ಳಬೇಕು ಎಂದು ವೇದವ್ಯಾಸ ಕೌಲಗಿ ತಿಳಿಸಿದರು.
ಜಿಲ್ಲಾ ಪಂಚಾಯತ್‌ನ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜವಳಿ ಮತ್ತು ಕೈಮಗ್ಗ ಇಲಾಖೆ ಉಪನಿರ್ದೇಶಕ ವಾಸುದೇವ ದೊಡ್ಡಮನಿ, ಜವಳಿ ಉತ್ತೇಜನಾಧಿಕಾರಿ ಮಂಜುನಾಥ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಧಾರವಾಡ ಜಿಲ್ಲೆಯಲ್ಲಿ ನೇಕಾರ ಸಾಲ ಮನ್ನಾ ಪ್ರಯೋಜನ ಪಡೆದ ಫಲಾನುಭವಿ ಗಳಿಗೆ ಸಾಲಮನ್ನಾ ಪ್ರಮಾಣಪತ್ರ ಮತ್ತು ಉಚಿತವಾಗಿ ಹೊಲಿಗೆಯಂತ್ರ ತರಬೇತಿ ಪಡೆದ ಮಹಿಳೆಯರಿಗೆ ಶಿಷ್ಯವೇತನ ವಿತರಿಸಲಾಯಿತು.